ಪಂಜಾಬ್'ನಲ್ಲಿ ಅ.23ರಂದು ಬಂಧಿತನಾಗಿದ್ದ ಕಾಶ್ಮೀರದ ನಿವಾಸಿ ಕಮಲ್'ದೀಪ್ ಎಂಬಾತನನ್ನು ವಿಚಾರಣೆಗೊಳಪಡಿಸಿದಾಗ ಈ ಮೇಲಿನ ಸುಳಿವು ಸಿಕ್ಕಿತೆನ್ನಲಾಗಿದೆ.
ಚಂಡೀಗಡ(ಅ. 27): ಬಾಬ್ಬರ್ ಖಾಲ್ಸಾ ಎಂಬ ಪಂಜಾಬ್ ಪ್ರತ್ಯೇಕತಾವಾದಿ ಸಂಘಟನೆಗೆ ಸೇರಿದ 12 ಉಗ್ರಗಾಮಿಗಳು ಪಾಕಿಸ್ತಾನದ ಮೂಲಕ ಪಂಜಾಬ್ ರಾಜ್ಯದೊಳಗೆ ನುಸುಳಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಈ 12 ಭಯೋತ್ಪಾದಕರು ಉತ್ತರ ಭಾರತದ ವಿವಿಧ ಪ್ರದೇಶಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ. ಪಂಜಾಬ್ ಪೊಲೀಸರು ಈಗಾಗಲೇ ಎಲ್ಲಾ ಪ್ರಮುಖ ಸೇನಾ ನೆಲೆಗಳ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.
ಪಂಜಾಬ್'ನಲ್ಲಿ ಅ.23ರಂದು ಬಂಧಿತನಾಗಿದ್ದ ಕಾಶ್ಮೀರದ ನಿವಾಸಿ ಕಮಲ್'ದೀಪ್ ಎಂಬಾತನನ್ನು ವಿಚಾರಣೆಗೊಳಪಡಿಸಿದಾಗ ಈ ಮೇಲಿನ ಸುಳಿವು ಸಿಕ್ಕಿತೆನ್ನಲಾಗಿದೆ. ಪಾಕಿಸ್ತಾನದಲ್ಲಿ ಅತ್ಯುನ್ನತ ಮಟ್ಟದ ತರಬೇತಿ ಪಡೆದ ಬಾಬ್ಬರ್ ಖಾಲ್ಸಾ ಸಂಘಟನೆಗೆ ಸೇರಿದ 12 ಮಂದಿ ಈಗಾಗಲೇ ಭಾರತವನ್ನು ಪ್ರವೇಶಿಸಿದ್ದಾರೆಂದು ಕಮಲ್'ದೀಪ್ ಮಾಹಿತಿ ನೀಡಿದ್ದಾನೆ.
ಪಂಜಾಬ್'ನಲ್ಲಿ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಭಯೋತ್ಪಾದಕರು ದಾಳಿ ನಡೆಸಲು ಯೋಜಿಸಿರುವ ಸಾಧ್ಯತೆ ಇದೆ ಎಂದು ಪಂಜಾಬ್ ಪೊಲೀಸ್ ಇಲಾಖೆ ಶಂಕಿಸಿದೆ.
ಭಾರತದಲ್ಲಿ ನಿಷೇಧಿತವಾಗಿರುವ ಬಾಬ್ಬರ್ ಖಾಲ್ಸಾ ಸಂಘಟನೆಯು ಪಂಜಾಬಿಗಳಿಗೆ ಪ್ರತ್ಯೇಕ ರಾಷ್ಟ್ರ ಬೇಕೆಂದು ಹೋರಾಟ ನಡೆಸಲು ಜನ್ಮ ತಳೆದಿದೆ. ಇತ್ತೀಚಿನ ದಿನಗಳಲ್ಲಿ ಈ ಸಂಘಟನೆ ಪುನಶ್ಚೇತನಗೊಂಡಿದ್ದು, ಪಾಕಿಸ್ತಾನದ ಐಎಸ್'ಐ ಬೆಂಬಲ ಹೊಂದಿದೆ ಎನ್ನಲಾಗಿದೆ.
