ನವದೆಹಲಿ[ಜೂ.11]: ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಫೆ.26ರಂದು ಪಾಕಿಸ್ತಾನದ ಬಾಲಾಕೋಟ್‌ ಮೇಲೆ ಭಾರತೀಯ ವಾಯುಪಡೆ ವಿಮಾನಗಳು ನಡೆಸಿದ ದಾಳಿ ಭರ್ಜರಿ ಫಲ ನೀಡಿದೆ. ಭಾರತ ಮತ್ತೊಮ್ಮೆ ತನ್ನ ಮೇಲೆ ಎರಗಬಹುದು ಎಂಬ ಅಂಜಿಕೆಯಿಂದ ಗಡಿಗೆ ಸಮೀಪವಿರುವ ಹಲವು ಭಯೋತ್ಪಾದಕ ಶಿಬಿರಗಳನ್ನು ಪಾಕಿಸ್ತಾನ ಬಂದ್‌ ಮಾಡಿಸಿದೆ. ಇದರ ಪರಿಣಾಮ ಸ್ಪಷ್ಟವಾಗಿ ಗೋಚರಿಸಲು ಆರಂಭಿಸಿದೆ. ಬಾಲಾಕೋಟ್‌ ದಾಳಿ ಬಳಿಕ ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ಯತ್ನಗಳೇ ಸ್ಥಗಿತಗೊಂಡಿವೆ.

ಬಾಲಾಕೋಟ್‌ ಮೇಲೆ ದಾಳಿ ನಡೆಸಿ, ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಶಿಬಿರಗಳನ್ನು ಭಾರತ ನಾಶಪಡಿಸಿತ್ತು. ಜತೆಯಲ್ಲೇ ರಾಜತಾಂತ್ರಿಕ ಒತ್ತಡವನ್ನು ಮುಂದುವರಿಸಿದ್ದ ಭಾರತ, ಉಗ್ರಗಾಮಿ ಶಿಬಿರಗಳು ಪಾಕಿಸ್ತಾನದಲ್ಲಿ ಇವೆ ಎಂಬ ಸಾಕ್ಷ್ಯವನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಪ್ರಸ್ತುತಪಡಿಸಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಗಡಿಯಲ್ಲಿದ್ದ 11 ಉಗ್ರಗಾಮಿ ಶಿಬಿರಗಳನ್ನು ಪಾಕಿಸ್ತಾನ ಮುಚ್ಚಿಸಿದೆ. ಲಷ್ಕರ್‌ ಎ ತೊಯ್ಬಾ, ಜೈಷ್‌ ಎ ಮೊಹಮ್ಮದ್‌ ಹಾಗೂ ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಗಳಿಗೆ ಸೇರಿದ ಶಿಬಿರಗಳು ಇವಾಗಿವೆ.

ಈ ಶಿಬಿರಗಳು ಭಾರತದೊಳಕ್ಕೆ ನುಸುಳುವ ಉಗ್ರರಿಗೆ ‘ಲಾಂಚ್‌ ಪ್ಯಾಡ್‌’ನಂತೆ ಕಾರ್ಯನಿರ್ವಹಿಸುತ್ತಿದ್ದವು. ಶಿಬಿರಗಳು ಬಂದ್‌ ಆಗಿರುವ ಕಾರಣದಿಂದ ಗಡಿಯಲ್ಲಿ ಒಳನುಸುಳುವಿಕೆ ಯತ್ನಗಳು ನಿಂತಿವೆ ಎಂದು ವರದಿಗಳು ತಿಳಿಸಿವೆ.