* ಪಾಕಿಸ್ತಾನದಲ್ಲಿ ಭಾರತೀಯನ ಪರ ಹೋರಾಟ ಮಾಡುತ್ತಿದ್ದ ಜೀನತ್ ಶಹಜಾದಿ* 2 ವರ್ಷಗಳ ಹಿಂದೆ ಲಾಹೋರ್'ನಿಂದ ಜೀನತ್ ಅಪಹರಣ* ಬಲೂಚಿಸ್ತಾನದ ಬುಡಕಟ್ಟು ಜನರ ನೆರವಿನಿಂದ ಜೀನತ್ ರಕ್ಷಣೆ* ಪ್ರೀತಿಗೋಸ್ಕರ ಪಾಕ್'ಗೆ ಹೋಗಿ ಸಿಕ್ಕಿಬಿದ್ದಿರುವ ಮುಂಬೈ ವ್ಯಕ್ತಿಯ ರಕ್ಷಣೆಗೆ ಜೀನತ್ ಹೋರಾಟ
ಲಾಹೋರ್(ಅ. 21): ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಪಾಕ್ ಪತ್ರಕರ್ತೆ ಜೀನತ್ ಶಹಜಾದಿ ಇದೀಗ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ. 26 ವರ್ಷದ ಜೀನತ್ ಅವರನ್ನು ಪಾಕ್ ಭದ್ರತಾ ಪಡೆಗಳು ರಕ್ಷಿಸಿವೆ. ಡೈಲಿ ನಯಿ ಖಬರ್ ಮತ್ತು ಮೆಟ್ರೋ ನ್ಯೂಸ್ ಟಿವಿಯ ವರದಿಗಾರ್ತಿ ಜೀನತ್ ಶಹಜಾದಿ ಅವರು ಪೇಶಾವರದ ಜೈಲಿನಲ್ಲಿರುವ ಭಾರತೀಯ ವ್ಯಕ್ತಿಯ ಪರವಾಗಿ ಹೋರಾಟ ನಡೆಸುತ್ತಿದ್ದಾಕೆ. ಅದೇ ಕಾರಣಕ್ಕೆ 2015ರ ಆ.19ರಂದು ಲಾಹೋರ್'ನಲ್ಲಿ ಆಕೆಯನ್ನು ಕಿಡ್ನಾಪ್ ಮಾಡಲಾಗಿತ್ತು.
ದೇಶ ವಿರೋಧಿ ಸಂಘಟನೆಗಳು ಆಕೆಯನ್ನು ಅಪಹರಿಸಿದ್ದವು. ಬಲೂಚಿಸ್ತಾನ ಮತ್ತು ಖೈಬರ್-ಪಖ್ತುಂಕ್ವಾ ಪ್ರಾಂತ್ಯದ ಬುಡಕಟ್ಟು ಜನರು ಜೀನತ್ ಶಹಜಾದಿಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದರು ಎಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?
ಮುಂಬೈನ ಉದ್ಯಮಿ ಹಮೀದ್ ಅನ್ಸಾರಿ ಆನ್'ಲೈನ್'ನಲ್ಲಿ ಪಾಕಿಸ್ತಾನೀ ಹುಡುಗಿಯೊಬ್ಬಳನ್ನು ಪ್ರೀತಿಸಿರುತ್ತಾನೆ. ಆಕೆಯನ್ನು ಭೇಟಿಯಾಗುವ ಸಾಹಸಕ್ಕೆ ಕೈಹಾಕಿದ ಆತ 2012ರಲ್ಲಿ ಆಫ್ಘಾನಿಸ್ತಾನದ ಮೂಲಕ ಪಾಕಿಸ್ತಾನಕ್ಕೆ ಎಂಟ್ರಿ ಕೊಡುತ್ತಾನೆ. ಆದರೆ ಬಹಳ ಬೇಗ ಪಾಕ್'ನ ಭದ್ರತಾ ಪಡೆಗಳಿಗೆ ಸಿಕ್ಕಿಬೀಳುತ್ತಾನೆ. ಗೂಢಚಾರಿಕೆ ಮಾಡಲು ಪಾಕಿಸ್ತಾನಕ್ಕೆ ಬಂದಿದ್ದಾನೆಂಬ ಆರೋಪದ ಮೇಲೆ ಮಿಲಿಟರಿ ನ್ಯಾಯಾಲಯವು ಹಮೀದ್ ಅನ್ಸಾರಿಗೆ 3 ವರ್ಷ ಜೈಲುವಾಸ ಶಿಕ್ಷೆ ವಿಧಿಸುತ್ತದೆ. ಆದರೆ, ಭದ್ರತಾ ಪಡೆಗಳು ಮಾತ್ರ ಈ ಎಲ್ಲಾ ವಿಚಾರವನ್ನು ಗೌಪ್ಯವಾಗಿಟ್ಟಿರುತ್ತದೆ. ಕುತೂಹಲದ ವಿಚಾರವೆಂದರೆ, ಶಿಕ್ಷೆ ಅವಧಿ ಮುಕ್ತಾಯವಾದರೂ ಹಮೀದ್ ಈಗಲೂ ಪೇಶಾವರದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಪ್ರೀತಿಗೋಸ್ಕರ ಭಾರತೀಯ ವ್ಯಕ್ತಿಯೊಬ್ಬ ಪಾಕಿಸ್ತಾನಕ್ಕೆ ಬಂದು ನಾಪತ್ತೆಯಾಗಿರುವ ವಿಚಾರ ಮಾತ್ರ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತದೆ. ಆಗ ಹಮೀದ್ ಅನ್ಸಾರಿ ಪರವಾಗಿ ಪತ್ರಕರ್ತೆ ಜೀನತ್ ಶಹಜಾದಿ ಹೋರಾಟ ಆರಂಭಿಸುತ್ತಾಳೆ. ಮುಂಬೈನಲ್ಲಿರುವ ಹಮೀದ್'ನ ತಾಯಿಯ ಪರವಾಗಿ ಜೀನತ್ ಅವರು ಸುಪ್ರೀಂಕೋರ್ಟ್'ನ ಮಾನವ ಹಕ್ಕು ವಿಭಾಗದಲ್ಲಿ ಮನವಿ ಅರ್ಜಿ ಸಲ್ಲಿಸುತ್ತಾಳೆ. ಹಮೀದ್ ಅನ್ಸಾರಿಯ ಪತ್ತೆ ಮಾಡುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ತಮ್ಮ ಕಸ್ಟಡಿಯಲ್ಲಿ ಹಮೀದ್ ಇರುವುದನ್ನು ಒಪ್ಪಿಕೊಳ್ಳುತ್ತವೆ. ಜೈಲಿನಿಂದ ಹಮೀದ್'ನ ಬಿಡುಗಡೆಗೂ ಜೀನತ್ ಪ್ರಯತ್ನ ನಡೆಸುತ್ತಾಳೆ.
ಸೋದರನ ಸಾವು:
ಜೀನತ್ ಶಹಜಾದಿಯ ಈ ಹೋರಾಟಕ್ಕೆ ಸಹಜವಾಗಿಯೇ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೂ ಜಗ್ಗದ ಜೀನತ್ ತಮ್ಮ ಹೋರಾಟ ಮುಂದುವರೆಸುತ್ತಾಳೆ. 2012ರ ಆಗಸ್ಟ್ ತಿಂಗಳಲ್ಲಿ ಜೀನತ್ ಶಹಜಾದಿಯ ಅಪಹರಣವಾಗುತ್ತದೆ. ಎಷ್ಟು ದಿನವಾದರೂ ಆಕೆಯ ಸುಳಿವು ಸಿಕ್ಕುವುದಿಲ್ಲ. ಇದರಿಂದ ಆಘಾತಕ್ಕೊಳಗಾಗುವ ಆಕೆಯ ಸೋದರ ಸದ್ದಾಂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಭಾರತೀಯನಿಗೆ ನ್ಯಾಯ ಕೊಡಿಸಲು ಮುಂದಾಗಿದ್ದಕ್ಕೆ ಜೀನತ್'ನ ಕುಟುಂಬ ಇಷ್ಟೆಲ್ಲಾ ನೋವು, ಆಘಾತ ಉಣ್ಣಬೇಕಾಯಿತು. ಈಗಲಾದರೂ ಮುಂಬೈನ ಹಮೀದ್ ಅನ್ಸಾರಿಗೆ ಬಿಡುಗಡೆಯ ಭಾಗ್ಯ ಸಿಕ್ಕರೆ ಜೀನತ್'ನ ಹೋರಾಟ, ಶ್ರಮ ಮತ್ತು ನೋವಿಗೆ ಸಾರ್ಥಕತೆ ಸಿಕ್ಕಂತಾಗುತ್ತದೆ.
