ನವದೆಹಲಿ/ವಿಶ್ವಸಂಸ್ಥೆ(ಅ.4): ಕಾಶ್ಮೀರ ವಿವಾದ ಮತ್ತು ಸರ್ಜಿಕಲ್ ದಾಳಿಯನ್ನು ಅಂತಾರಾಷ್ಟ್ರೀಯ ವೇದಿಕೆಗೆ ಕೊಂಡೊಯ್ದು ಭಾರತಕ್ಕೆ ಛೀಮಾರಿ ಹಾಕಿಸಬೇಕೆಂಬ ಪಾಕಿಸ್ತಾನದ ಆಸೆಗೆ ತಣ್ಣೀರು ಬಿದ್ದಿದೆ. ಈ ಎರಡೂ ವಿಚಾರಗಳನ್ನು ಚರ್ಚಿಸಬೇಕು ಎಂದು ಪಾಕಿಸ್ತಾನ ಮಾಡಿದ ಕೋರಿಕೆಯನ್ನು ವಿಶ್ವಸಂಸ್ಥೆ ನಿರಾಕರಿಸಿದ್ದು, ನೆರೆರಾಷ್ಟ್ರಕ್ಕೆ ವಿಶ್ವಸಂಸ್ಥೆಯಲ್ಲೂ ತೀವ್ರ ಹಿನ್ನಡೆಯಾಗಿದೆ.

ಈ ಕುರಿತು ಮಾತನಾಡಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಕ್ಟೋಬರ್ ತಿಂಗಳ ಅಧ್ಯಕ್ಷ, ರಷ್ಯಾ ರಾಯಭಾರಿ ವಿಟಲಿ ಚರ್ಕಿನ್, ‘‘ಭಾರತ-ಪಾಕ್ ನಡುವಿನ ಬಿಕ್ಕಟ್ಟು ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚರ್ಚಿಸುವುದಿಲ್ಲ,’’ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗೆಗಿನ ಪ್ರಶ್ನೆಗೆ ಅವರು, ‘‘ವಿಶ್ವಸಂಸ್ಥೆಗೆ ಚರ್ಚಿಸಲು ಇನ್ನೂ ಅನೇಕ ವಿಚಾರಗಳಿವೆ,’’ ಎಂದು ಉತ್ತರಿಸಿದ್ದಾರೆ. ಇನ್ನೊಂದೆಡೆ, ಭಾರತ-ಪಾಕ್ ನಡುವಿನ ಬಿಕ್ಕಟ್ಟು ಶಮನವಾಗಬೇಕೆಂದರೆ ಎರಡೂ ದೇಶಗಳ ಸೇನೆಯು ಮುಕ್ತ ಸಂಭಾಷಣೆ ಮಾಡಬೇಕು ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.

ಏತನ್ಮಧ್ಯೆ, ಪಾಕಿಸ್ತಾನವನ್ನು ಭಯೋತ್ಪಾದನೆ ಆಯೋಜಕ ದೇಶ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಹಿ ಸಂಗ್ರಹವನ್ನು ಶ್ವೇತಭವನ ಸ್ಥಗಿತಗೊಳಿಸಿದೆ. ಸಹಿಗೆ ಅಗತ್ಯವಾದ ಪ್ರಕ್ರಿಯೆಗಳನ್ನು ಪೂರೈಸದ ಕಾರಣ, ಸಹಿ ಸಂಗ್ರಹವನ್ನು ಇಲ್ಲಿಗೇ ಕೊನೆಗೊಳಿಸಲಾಗುವುದು ಎಂದು ಹೇಳಿದೆ. ಈ ಅರ್ಜಿಗೆ 5 ಲಕ್ಷದಷ್ಟು ಮಂದಿ ಸಹಿ ಮಾಡಿದ್ದರು. ಕೆಲವು ಸಹಿಗಳು ನಕಲಿಯಾಗಿರುವ ಸಾಧ್ಯತೆಗಳೂ ಇದ್ದು, ಈ ಹಿನ್ನೆಲೆಯಲ್ಲಿ ವೈಟ್‌ಹೌಸ್ ಈ ನಿರ್ಧಾರ ಕೈಗೊಂಡಿರಬಹುದು ಎನ್ನಲಾಗಿದೆ. ಇದೇ ವೇಳೆ, ಭಾರತದ ವಿರುದ್ಧವೂ ಶ್ವೇತಭವನಕ್ಕೆ ಒಂದು ಅರ್ಜಿ ಸಲ್ಲಿಸಲಾಗಿದ್ದು, ಭಾರತವು ನೆರೆರಾಷ್ಟ್ರಗಳಲ್ಲಿ ಭಯೋತ್ಪಾದನೆ ವಾತಾವರಣ ಸೃಷ್ಟಿಸುತ್ತಿದೆ ಎಂದು ಆರೋಪಿಸಲಾಗಿದೆ.

ಮತ್ತೆ ಗುಂಡಿನ ದಾಳಿ: ಕಳೆದ 36 ಗಂಟೆಗಳಲ್ಲಿ 6ನೇ ಬಾರಿ ಎಂಬಂತೆ ಜಮ್ಮುವಿನ ಪಲ್ಲಾನ್‌ವಾಲಾ ವಲಯದಲ್ಲಿ ಪಾಕ್ ಸೇನೆಯು ಕದನ ವಿರಾಮ ಉಲ್ಲಂಘಿಸಿದೆ. ಇದಕ್ಕೂ ಮೊದಲು ರಜೌರಿ ಜಿಲ್ಲೆಯ ಮೂರು ಪ್ರದೇಶಗಳಲ್ಲೂ ಗುಂಡಿನ ದಾಳಿ ನಡೆದಿತ್ತು.

ಪಾಕ್ ದೋಣಿ ವಶಕ್ಕೆ: ರಾವಿ ನದಿಯಲ್ಲಿ ಭಾರತೀಯ ಜಲಗಡಿ ಪ್ರವೇಶಿಸಿದ ಪಾಕಿಸ್ತಾನಿ ದೋಣಿಯೊಂದನ್ನು ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ಬಿಎಸ್‌ಎ್ ವಶಪಡಿಸಿಕೊಂಡಿದೆ. ಗುಜರಾತ್ ಕರಾವಳಿಯಾಚೆ ಪಾಕ್ ದೋಣಿ ಮತ್ತು ಮೀನುಗಾರರನ್ನು ವಶಪಡಿಸಿಕೊಂಡ ಎರಡೇ ದಿನಗಳಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಟೋಟಾ ಪೋಸ್ಟ್ ಪ್ರದೇಶದಲ್ಲಿ ಈ ಖಾಲಿ ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ. ‘‘ಅದರಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳಿಲ್ಲ. ಸೋಮವಾರ ನದಿಯ ಹರಿವು ಹೆಚ್ಚಿದ್ದ ಕಾರಣ, ದೋಣಿಯು ಕೊಚ್ಚಿಕೊಂಡು ಭಾರತದ ಜಲ ವ್ಯಾಪ್ತಿಗೆ ಬಂದಿದೆ,’’ ಎಂದು ಬಿಎಸ್‌ಎ್ ಹೇಳಿದೆ. ಮತ್ತೊಂದು ಬೆಳವಣಿಗೆಯಲ್ಲಿ ಪ್ರತ್ಯೇಕತಾವಾದಿ ನಾಯಕಿ ಆಸಿಯಾ ಅಂದ್ರಾಬಿಯನ್ನು ಪೊಲೀಸರು ಬಂಸಿದ್ದಾರೆ.

ವೆಬ್‌ಸೈಟ್ ಹ್ಯಾಕ್: ರಾಷ್ಟ್ರೀಯ ಹಸಿರು ನ್ಯಾಯಾಕರಣದ ವೆಬ್‌ಸೈಟ್ ಹ್ಯಾಕ್ ಆದ ಮಾರನೇ ದಿನ ಅಂದರೆ ಮಂಗಳವಾರ ಕೇರಳದ ಪ್ರತಿಷ್ಠಿತ ವಿವಿ ಕೇರಳ ಯುನಿವರ್ಸಿಟಿ ಆ್ ಫಿಶರೀಸ್ ಆ್ಯಂಡ್ ಓಷಿಯನ್ ಸ್ಟಡೀಸ್‌ನ ವೆಬ್‌ಸೈಟ್ ಕೂಡ ಹ್ಯಾಕ್ ಆಗಿದೆ. ಬೆಳಗ್ಗೆ ವೆಬ್‌ಸೈಟ್ ತೆರೆಯುತ್ತಲೇ ಅದರಲ್ಲಿ ‘‘ಪಾಕಿಸ್ತಾನ ಜಿಂದಾಬಾದ್’’ ಎಂಬ ಘೋಷಣೆ ಕಂಡುಬಂದಿದ್ದು, ಕೂಡಲೇ ಸೈಬರ್ ಸೆಲ್‌ಗೆ ದೂರು ನೀಡಲಾಗಿದೆ ಎಂದು ವಿವಿ ತಿಳಿಸಿದೆ.

ಪಾಕ್ ಯುವತಿಗೆ ಸುಷ್ಮಾ ಪ್ರತಿಕ್ರಿಯೆ ವೈರಲ್

ಭಾರತ-ಪಾಕ್ ನಡುವೆ ಪ್ರಕ್ಷುಬ್ಧ ಸ್ಥಿತಿ ಏರ್ಪಟ್ಟ ಸಂದರ್ಭದಲ್ಲೇ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲೆಂದು ಭಾರತಕ್ಕೆ ಆಗಮಿಸಿದ ಯುವತಿಯರು ಸುರಕ್ಷಿತವಾಗಿ ತಾಯಿನಾಡು ತಲುಪುವಂತೆ ಸಹಾಯ ಮಾಡಿದ್ದಾರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್. ತಮ್ಮ ಆತಂಕದ ಬಗ್ಗೆ ಯುವತಿಯೊಬ್ಬಳು ಸುಷ್ಮಾಗೆ ಮಾಡಿರುವ ಟ್ವೀಟ್, ಅದಕ್ಕೆ ಸುಷ್ಮಾ ಪ್ರತಿಕ್ರಿಯಿಸಿದ ರೀತಿ ಇದೀಗ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಚಿವೆಗೆ ಟ್ವೀಟ್ ಮಾಡಿದ್ದ ಪಾಕ್ ಯುವತಿ ಅಲಿಯಾ ಹರೀರ್, ತಾವು ಆತಂಕದಲ್ಲಿದ್ದು, ಪಾಕ್‌ಗೆ ಸುರಕ್ಷಿತವಾಗಿ ಹಿಂದಿರುಗುತ್ತೇವೋ ಇಲ್ಲವೋ ಎಂಬ ಭೀತಿ ಕಾಡುತ್ತಿದೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸುಷ್ಮಾ, ‘‘ಅಲಿಯಾ- ನಿಮ್ಮ ಸುರಕ್ಷತೆ ಬಗ್ಗೆ ನಾನು ಕಾಳಜಿ ಹೊಂದಿದ್ದೇನೆ. ಏಕೆಂದರೆ, ಒಬ್ಬ ಹೆಣ್ಣುಮಗಳು ಎಲ್ಲರ ಮಗಳೂ ಆಗಿರುತ್ತಾಳೆ,’’ ಎಂದಿದ್ದರು. ಪಾಕ್ ತಲುಪಿದ ಬಳಿಕ ಅಲಿಯಾ ಅವರು ಮತ್ತೊಮ್ಮೆ ಟ್ವೀಟ್ ಮಾಡಿ ಸಚಿವೆ ಸುಷ್ಮಾರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ದೇಶದಲ್ಲಿ ತೀವ್ರವಾದ ಮತ್ತು ಉಗ್ರವಾದವನ್ನು ಮಟ್ಟಹಾಕುವುದೇ ನಮ್ಮ ಸರ್ಕಾರದ ಆದ್ಯತೆಯ ನೀತಿ. ಈ ಮೂಲಕ ದೇಶಾದ್ಯಂತ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು ನಮ್ಮ ಗುರಿ.

- ನವಾಜ್ ಷರೀಪ್, ಪಾಕ್ ಪ್ರಧಾನಿ