ಇಸ್ಲಾಮಾಬಾದ್‌[ಜೂ.12]: ತನ್ನ ದೇಶದಲ್ಲಿರುವ ಸಿಖ್ಖರ ಪವಿತ್ರ ಯಾತ್ರಾಸ್ಥಳ ಕರ್ತಾರ್‌ಪುರ ಕಾರಿಡಾರ್‌ ಅಭಿವೃದ್ಧಿಗಾಗಿ ಪಾಕಿಸ್ತಾನ ಸರ್ಕಾರ 100 ಕೋಟಿ ರು. ವೆಚ್ಚ ಮಾಡಲು ನಿರ್ಧರಿಸಿದೆ.

ಮಂಗಳವಾರ ಮಂಡಿಸಲಾದ ಪಾಕಿಸ್ತಾನದ ಬಜೆಟ್‌ನಲ್ಲಿ ಈ ಘೋಷಣೆ ಮಾಡಲಿದೆ. ಈ ಕಾರಿಡಾರ್‌ ಮಾರ್ಗವು ಭಾರತದಲ್ಲಿರುವ ಗುರುದಾಸ್‌ಪುರ ಜಿಲ್ಲೆಯಲ್ಲಿರುವ ಡೇರಾ ಬಾಬಾ ನಾನಕ್‌ ಹಾಗೂ ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ ದರ್ಬಾರ್‌ ಸಾಹಿಬ್‌ಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೆ, ಈ ಮಾರ್ಗದ ಮೂಲಕ ಭಾರತೀಯ ಸಿಖ್‌ ಸಮುದಾಯವು ವೀಸಾ ಪಡೆಯದೆಯೇ ಪಾಕಿಸ್ತಾನದ ಕರ್ತಾರ್‌ಪುರಕ್ಕೆ ಭೇಟಿ ನೀಡಬಹುದಾಗಿದೆ.

ಈ ಬಜೆಟ್‌ನಲ್ಲಿ ಮೀಸಲಾದ 100 ಕೋಟಿ ರು. ಅನ್ನು 2019-20ನೇ ಸಾಲಿನಲ್ಲಿ ಕರ್ತಾರ್‌ಪುರ ಕಾರಿಡಾರ್‌ ನಿರ್ಮಾಣಕ್ಕೆ ಅಗತ್ಯವಿರುವ ಜಮೀನು ಖರೀದಿ ಹಾಗೂ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ ಎಂದು ಪಾಕಿಸ್ತಾನದ ಮಾಧ್ಯಮವೊಂದು ವರದಿ ಮಾಡಿದೆ. ಯೋಜನಾ ಆಯೋಗ, ಯೋಜನಾ ಸಚಿವಾಲಯ, ಅಭಿವೃದ್ಧಿ ಹಾಗೂ ಸುಧಾರಣೆ ಸಚಿವಾಲಯದ ಪ್ರಕಾರ ಕರ್ತಾರ್‌ಪುರ ಯೋಜನೆಗೆ 300 ಕೋಟಿ ರು. ಅಗತ್ಯವಿದೆ ಎಂದು ಹೇಳಲಾಗಿದೆ.

ಇನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಯಂ ನಿಯಂತ್ರಣ ಹೇರಿಕೊಂಡಿದೆ ಎಂಬ ಊಹಾಪೋಹಗಳ ನಡುವೆಯೇ, ಪಾಕಿಸ್ತಾನ 1150 ಕೋಟಿ ರು. ಅನ್ನು ರಕ್ಷಣಾ ವಲಯಕ್ಕೆ ಮೀಸಲಿಟ್ಟಿದೆ. ಈ ಮೂಲಕ ರಕ್ಷಣಾ ವೆಚ್ಚಕ್ಕೆ ಪಾಕಿಸ್ತಾನ ಕಡಿವಾಣ ಹಾಕುತ್ತದೆ ಎಂಬ ಊಹೆ ಹುಸಿಯಾಗಿದೆ.