ಪದ್ಮಶ್ರೀ ಪಡೆದ ಬಳಿಕ ಕೆಲಸ ಸಿಗುತ್ತಿಲ್ಲ: ಇರುವೆ ಮೊಟ್ಟೆ ತಿಂದು ಜೀವನ ನಡೆಸ್ತಿದ್ದಾನೆ ರೈತ!
ಇರುವೆ ಮೊಟ್ಟೆ ತಿಂದು ಬದುಕುತ್ತಿದ್ದಾನೆ ಪದ್ಮಶ್ರೀ ಪ್ರಶಸ್ತಿ ವಿಜೇತ| ಸಾವಿರಾರು ಮಂದಿಗೆ ಜೀವಜಲ ಒದಗಿಸಿದ ಒಡಿಶಾದ ಕಾಲುವೆ ಮನುಷ್ಯನಿಗೀಗ ಬದುಕು ಸಾಗಿಸುವುದೇ ಕಷ್ಟ| ಉನ್ನತ ಪ್ರಶಸ್ತಿ ಪಡೆದ ರೈತನಿಗೆ ಕೆಲಸ ಕೊಡೋರೆ ಇಲ್ಲ!
ಭುವನೇಶ್ವರ್[ಜೂ.27]: ನಾಳೆಯ ದಿನಗಳು ಹೇಗಿರುತ್ತವೆ ಎಂಬುವುದು ಯಾರಿಗೂ ತಿಳಿದಿಲ್ಲ. ಇಂದು ಅತ್ಯುನ್ನತ ಸ್ಥಾನದಲ್ಲಿದ್ದವರು, ನಾಳೆ ಕೊನೆಯ ಸ್ಥಾನಕ್ಕೆ ಮುಗ್ಗರಿಸಬಹುದು. ಬದುಕಿನ ಆಟದಲ್ಲಿ ಯಾವುದೂ ನಿಶ್ಚಿತವಲ್ಲ. ಇಂತಹುದೇ ಸ್ಥಿತಿ ಆದಿವಾಸಿ ರೈತ, ದೈತಾರಿ ನಾಯಕನಿಗೂ ಬಂದೊದಗಿದೆ.
ಹೌದು ಒಡಿಶಾದ ಕ್ಯೋಂಝರ್ ಜಿಲ್ಲೆಯ ಖನಿಜ ಸಂಪನ್ನ ತಾಲ್ ಬೈತರ್ಣಿ ಹಳ್ಳಿಯ 75 ವರ್ಷದ ದೈತಾರಿ ನೀರಾವರಿಗಾಗಿ 2010ರಿಂದ 2013ವರೆಗೆ ಏಕಾಂಗಿಯಾಗಿ ಗೋನಾಸಿಕಾದ ಬೆಟ್ಟವನ್ನು ಅಗೆದು ಮೂರು ಕಿಲೋ ಮೀಟರ್ ಉದ್ದದ ಕಾಲುವೆ ನಿರ್ಮಿಸಿದ್ದರು. ಈ ಕಾಲುವೆಯ ಮೂಲಕ ಹರಿಯುವ ನೀರು ಸುಮಾರು 100 ಎಕರೆ ಪ್ರದೇಶವನ್ನು ಹಸಿರುಮಯವನ್ನಾಗಿಸಿದೆ. ಸಾವಿರಾರು ಜನರಿಗೆ ನೀರು ಒದಗಿಸಿದ್ದ ದೈತಾರಿ 'ಒಡಿಶಾದ ಕಾಲುವೆ ಮನುಷ್ಯ' ಎಂದೇ ಫೇಮಸ್. ಇವರ ಸಮಾಜಮುಖಿ ಕಾರ್ಯವನ್ನು ಗುರುತಿಸಿದ್ದ ಕೇಂದ್ರ ಸರ್ಕಾರ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಆದರೆ ಈ ಪ್ರಶಸ್ತಿಯಿಂದ ದೈತಾರಿಗೆ ಯಾವುದೇ ಲಾಭವಾಗಿಲ್ಲ. ಬದಲಾಗಿ ಇದಾದ ಬಳಿಕ ಅವರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಹಿಂದೂಸ್ತಾನ್ ಟೈಮ್ಸ್ ಅನ್ವಯ 'ದೈತಾರಿಗೆ ಕೆಲಸವೇ ಸಿಗುತ್ತಿಲ್ಲ ಯಾಕೆಂದರೆ ಇಷ್ಟು ಉನ್ನತ ಪ್ರಶಸ್ತಿ ಪಡೆದ ದೈತಾರಿ, ಬಹುದೊಡ್ಡ ವ್ಯಕ್ತಿ ಎಂಬುವುದು ಜನರ ಅಭಿಪ್ರಾಯವಾಗಿದೆ. ಹೀಗಾಗಿ ಜನರು ದೈತಾರಿಗೆ ಕೆಲಸ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಈ ಬಡ ರೈತನ ಪರಿಸ್ಥಿತಿ ಅದೆಷ್ಟು ಹದಗೆಟ್ಟಿದೆ ಎಂದರೆ ಇವರ ಕುಟುಂಬ ಸದ್ಯ ತಿನ್ನಲು ಬೇರೆ ಆಹಾರವಿಲ್ಲದೆ ಇರುವೆ ಮೊಟ್ಟೆಗಳನ್ನು ತಿಂದು ಬದುಕುತ್ತಿದೆ'
ತನ್ನ ಪರಿಸ್ಥಿತಿ ಬಗ್ಗೆ ಮಾತನಾಡಿರುವ ದೈತಾರಿ 'ಪದ್ಮಶ್ರೀ ಪ್ರಶಸ್ತಿಯಿಂದ ನನಗೇನು ಲಾಭವಾಗಿಲ್ಲ. ಈ ಹಿಂದೆ ನಾನು ದಿನಗೂಲಿ ಕೆಲಸ ಮಾಡುತ್ತಿದ್ದೆ. ಆದರೀಗ ಜನ ನನಗೆ ಕೆಲಸ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಕೂಲಿ ಕೆಲಸ ನೀಡುವುದರಿಂದ ನನಗೆ ಅವಮಾನಿಸಿದಂತಾಗುತ್ತದೆ ಎಂಬುವುದು ಅವರ ಅಭಿಪ್ರಾಯ. ಈಗ ಬೇರೆ ದಾರಿ ಇಲ್ಲದೇ ಇರುವೆ ಮೊಟ್ಟೆ ತಿಂದು ಜೀವನ ನಡೆಸುತ್ತಿದ್ದೇನೆ. ಪ್ರಶಸ್ತಿ ನನ್ನ ಜೀವನ ಹಾಳು ಮಾಡಿದೆ ಹೀಗಾಗಿ ಇದನ್ನು ಮರಳಿಸಲು ಯೋಚಿಸುತ್ತಿದ್ದೇನೆ' ಎಂದಿದ್ದಾರೆ.
ಕೆಲ ವರ್ಷಗಳ ಹಿಂದೆ ದೈತಾರಿವಗೆ ಇಂದಿರಾ ಗಾಂಧಿ ಆವಾಸ್ ಯೋಜನೆಯಡಿಯಲ್ಲಿ ಮನೆ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಆದರೆ ಅದು ಕೂಡಾ ಮಾತಿಗಷ್ಟೇ ಸೀಮಿತವಾಯ್ತು. ಇಂದಿಗೂ ದೈತಾರಿ ತನ್ನ ಹಳೆಯ ಗುಡಿಸಲಿನಲ್ಲೇ ಇದ್ದಾರೆ. ಪ್ರತಿ ತಿಂಗಳು 700 ರೂಪಾಯಿ ವೃದ್ಧಾಪ್ಯ ವೇತನ ಅವರಿಗೆ ಸಿಗುತ್ತಿದೆ.
ತನ್ನ ತಂದೆಗೆ ನೀಡಿದ್ದ ಇತರ ಭರವಸೆಗಳ ಕುರಿತಾಗಿ ಉಲ್ಲೇಖಿಸಿರುವ ದೈತಾರಿ ಮಗ 'ಅಧಿಕಾರಿಗಳು ನನ್ನ ತಂದೆ ನಿರ್ಮಿಸಿದ ಕಾಲುವೆಗೆ ಕಾಂಕ್ರೀಟ್ ಹಾಕುವುವಾಗಿ ಹೆಳಿದ್ದರು. ಆದರೆ ಇದ್ಯಾವುದೂ ನಡೆದಿಲ್ಲ. ಜನರಿಗೆ ಶುದ್ಧ ನೀರು ಪೂರೈಸಲು ಆಗಲಿಲ್ಲ ಎಂಬ ನೋವು ಇಂದಿಗೂ ನನ್ನ ತಂದೆಯನ್ನು ಕಾಡುತ್ತಿದೆ' ಎಂದಿದ್ದಾರೆ.
ತನ್ನ ಪರಿಸ್ಥಿತಿಯಿಂದ ನೊಂದಿರುವ ದೈತಾರಿ ತನಗೆ ಸಿಕ್ಕ ಪ್ರಶಸ್ತಿಯನ್ನು ಮೇಕೆಯ ಕೊರಳಿಗೆ ಹಾಕಿದ್ದಾರೆ. ದೈತಾರಿ ಅಳಲನ್ನು ಆಲಿಸಿರುವ ಜಿಲ್ಲಾಧಿಕಾರಿ ಬಡ ರೈತನ ಸಮಸ್ಯೆಗೆ ಪರಿಹಾರ ಹುಡುಕುತ್ತೇವೆ ಹಾಗೂ ಪ್ರಶಸ್ತಿ ಮರಳಿಸದಂತೆ ಮನವೊಲಿಸುತ್ತೇವೆ ಎಂದಿದ್ದಾರೆ.