ನವದೆಹಲಿ(ಆ.16): ಪ್ರಧಾನಿ ಮೋದಿ ಅವರ ಕಟು ಟೀಕಾಕಾರರಾಗಿರುವ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಇದೇ ಮೊದಲ ಬಾರಿಗೆ ಮೋದಿ ಅವರ ನಿಲುವು ಬಂಬಲಿಸಿ ಅಚ್ಚರಿ ಮೂಡಿಸಿದ್ದಾರೆ.

ಸ್ವಾತಂತ್ರ್ಯೋತ್ಸವ ನಿಮಿತ್ತ ಪ್ರಧಾನಿ ಮೋದಿ ಕೆಂಪುಕೋಟೆಯಿಂದ ಮಾಡಿದ ಭಾಷಣದ ಪ್ರಮುಖ ಮೂರು ಸಂಗತಿಯನ್ನು ಪಿ.ಚಿದಂಬರಂ ಬೆಂಬಲಿಸಿದ್ದಾರೆ.

ಜನಸಂಖ್ಯಾ ನಿಯಂತ್ರಣ, ಪ್ಲಾಸ್ಟಿಕ್ ನಿರ್ಮೂಲನೆ ಮತ್ತು ಸಂಪತ್ತು ಸೃಷ್ಟಿಸುವವರನ್ನು ಗೌರವಿಸಬೇಕು ಎಂಬ ಮೋದಿ ಅವರ  ವಿಚಾರಧಾರೆಗಳನ್ನು ಚಿದಂಬರಂ ಮೆಚ್ಚಿ, ಗುಣಗಾನ ಮಾಡುವುದರ ಜೊತೆಗೆ   ಬಹಿರಂಗವಾಗಿ ಸ್ವಾಗತಿಸಿದ್ದಾರೆ.

ದೇಶದ ಪ್ರಗತಿಗೆ ಜನಸಂಖ್ಯಾ ನಿಯಂತ್ರಣಕ್ಕೆ ಪ್ರಧಾನಿ ಮೋದಿ ತೆಗೆದುಕೊಂಡಿರುವ ನಿಲುವು ಅತ್ಯಂತ ಸಮಂಜಸ ಎಂದು ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

ಅದರಂತೆ ಪ್ಲಾಸ್ಟಿಕ್ ನಿರ್ಮೂಲನೆಗೆ ಮೋದಿ ಕೊಟ್ಟಿರುವ ಕರೆಯನ್ನು ಬೆಂಬಲಿಸುವುದಾಗಿ ಚಿದಂಬರಂ ತಿಳಿಸಿದ್ದಾರೆ. ಪರಿಸರ ರಕ್ಷಣೆಗಾಗಿ ತುರ್ತಾಗಿ ಪ್ಲಾಸ್ಟಿಕ್ ನಿಷೇಧವಾಗಬೇಕಿದ್ದು, ಮೋದಿ ಕರೆ ಸಕಾಲಿಕ ಎಂದು ಅವರು ನುಡಿದಿದ್ದಾರೆ. 

ಅಲ್ಲದೇ ಸಂಪತ್ತು ಸೃಷ್ಟಿಸುವವರನ್ನು ಗೌರವಿಸಬೇಕೆಂಬ ಮೋದಿ ಮಾತು ನಿಜ ಎಂದಿರುವ ಚಿದಂಬರಂ,  ದೇಶದ ಪ್ರಗತಿಯಲ್ಲಿ ಉದ್ಯಮಿಗಳ ಪಾತ್ರ ಬಹಳ ಪ್ರಮುಖವಾಗಿದೆ ಎಂದು ಸಹಮತ ಸೂಚಿಸಿದ್ದಾರೆ.