ನವದೆಹಲಿ[ಆ.20]: ಏರ್‌ಸೆಲ್‌- ಮ್ಯಾಕ್ಸಿಸ್‌ ಹಾಗೂ ಐಎನ್‌ಎಕ್ಸ್‌ ಮೀಡಿಯಾ ಪ್ರಕರಣಗಳಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ಸಿನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರಿಗೆ ಹೊಸದೊಂದು ಪ್ರಕರಣ ಸುತ್ತಿಕೊಳ್ಳುವ ಸಾಧ್ಯತೆ ಇದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ಕಂಪನಿ 111 ವಿಮಾನಗಳನ್ನು ಖರೀದಿ ಮಾಡಿದ ಪ್ರಕರಣ ಸಂಬಂಧ ಚಿದಂಬರಂ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಸಮನ್ಸ್‌ ಜಾರಿಗೊಳಿಸಿದೆ. ಆ.23ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಏರ್‌ ಇಂಡಿಯಾ ವಿಮಾನಗಳ ಖರೀದಿ ಪ್ರಕ್ರಿಯೆಯಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪ ಕುರಿತು ಜಾರಿ ನಿರ್ದೇಶನಾಲಯ ಈಗಾಗಲೇ ತನಿಖೆ ನಡೆಸುತ್ತಿದೆ. ಆ ವ್ಯವಹಾರ ನಡೆದ ಸಂದರ್ಭದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದ ಎನ್‌ಸಿಪಿ ನಾಯಕ ಪ್ರಫುಲ್‌ ಪಟೇಲ್‌ ಅವರನ್ನು ಇತ್ತೀಚೆಗೆ ವಿಚಾರಣೆಗೊಳಪಡಿಸಲಾಗಿತ್ತು. ಅವರು ನೀಡಿದ ಮಾಹಿತಿ ಆಧಾರದಲ್ಲಿ ಚಿದು ಅವರಿಗೆ ಬುಲಾವ್‌ ನೀಡಲಾಗಿದೆ ಎಂದು ಹೇಳಲಾಗಿದೆ.

ಚಿದಂಬರಂ ನೇತೃತ್ವದ ಸಚಿವರ ಉನ್ನತಾಧಿಕಾರ ಸಮಿತಿಯೇ ವಿಮಾನ ಖರೀದಿ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿತ್ತು. ಹೀಗಾಗಿ ಇದು ಬಹುಸ್ತರದ, ಸಾಮೂಹಿಕ ನಿರ್ಧಾರವಾಗಿತ್ತು ಎಂದು ಪ್ರಫುಲ್‌ ಪಟೇಲ್‌ ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ.

ಏರ್‌ಬಸ್‌ ಕಂಪನಿಯಿಂದ 48 ಹಾಗೂ ಬೋಯಿಂಗ್‌ ಕಂಪನಿಯಿಂದ 68 ವಿಮಾನಗಳನ್ನು 70 ಸಾವಿರ ಕೋಟಿ ರು. ವೆಚ್ಚದಲ್ಲಿ ದಶಕದ ಹಿಂದೆ ಖರೀದಿಸಲಾಗಿತ್ತು. ಅದಾಗಲೇ ಆರ್ಥಿಕ ನಷ್ಟಕ್ಕೆ ಸಿಲುಕಿದ್ದ ಏರ್‌ ಇಂಡಿಯಾ, ಈ ಖರೀದಿ ನಿರ್ಧಾರದಿಂದಾಗಿ ಮತ್ತಷ್ಟುಹೊರೆ ಹೊತ್ತುಕೊಳ್ಳುವಂತಾಗಿತ್ತು.