ಐಎನ್ಎಕ್ಸ್ ಮಿಡಿಯ ಹಗರಣ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರಿಗೆ ಕಗ್ಗಂಟಾಗಿ ಪರಿಣಮಿಸುತ್ತಿದೆ. ಹಗರಣಕ್ಕೆ ಸಂಬಂಧಿಸಿದಂತೆ ಇಂದು ಚಿದಂಬರಂ ಸಿಬಿಐ ಕೇಂದ್ರ ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದರು.
ನವದೆಹಲಿ(ಜೂ.6): ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಇಂದು ಸಿಬಿಐ ಕೇಂದ್ರ ಕಚೇರಿಗೆ ವಿಚಾರಣೆಗಾಗಿ ಹಾಜರಾದರು. ಐಎನ್ಎಕ್ಸ್ ಮೀಡಿಯಾದ ವಿದೇಶಿ ಹೂಡಿಕೆಗೆ ಅನುಮತಿ ನೀಡಿದ ವಿಚಾರದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಚಿದಂಬರಂ ಅವರನ್ನು ವಿಚಾರಣೆ ನಡೆಸುತ್ತಿದೆ.
ಸುಮಾರು 305 ಕೋಟಿ ರೂಪಾಯಿಗಳ ವಿದೇಶಿ ಹೂಡಿಕೆ ಪ್ರಚಾರ ಮಂಡಳಿಗೆ ಅನುಮತಿ ನೀಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿದಂಬರಂ ಪಾತ್ರವಿದೆ ಎನ್ನಲಾಗಿದ್ದು, ಐಎನ್ಎಕ್ಸ್ ಮೀಡಿಯಾದ ಪ್ರವರ್ತಕರು ಮಾಜಿ ಮಾಧ್ಯಮ ಪ್ರಚಾರಕ ಪೀಟಕ್ ಮುಖರ್ಜಿ ಹಾಗೂ ಇಂದ್ರಾಣಿ ಮುಖರ್ಜಿ ಆಗಿದ್ದಾರೆ.
ಐಎನ್ಎಕ್ಸ್ ಮೀಡಿಯಾಗೆ ವಿದೇಶಿ ಹೂಡಿಕೆ ಅನುಮತಿ ನೀಡಿಕೆಯಲ್ಲಿ ಅಕ್ರಮ ನಡೆದಿದೆ ಮತ್ತು ಯುಪಿಎ-1 ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ ಇದರಲ್ಲಿ ಭಾಗಿಯಾಗಿದ್ದರು ಎಂದು ಕಳೆದ ವರ್ಷ ಮೇ 15ರಂದು ಸಿಬಿಐ ಎಫ್ಐಆರ್ ದಾಖಲಿಸಿತ್ತು.
ಮೀಡಿಯಾಗೆ ಅನುಮತಿ ನೀಡಿ ಸುಮಾರು 10 ಲಕ್ಷ ರೂಪಾಯಿ ಲಂಚ ಪಡೆದಿದ್ದರು ಎಂದು ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರು ಕೂಡ ಈ ಕೇಸಿಗೆ ಸಂಬಂಧಪಟ್ಟಂತೆ ಬಂಧಿಯಾಗಿದ್ದರು. ಐಎನ್ಎಕ್ಸ್ ಮೀಡಿಯಾದ ಅಂದಿನ ನಿರ್ದೇಶಕ ಇಂದ್ರಾಣಿ ಮುಖರ್ಜಿ, ನ್ಯೂಸ್ ನಿರ್ದೇಶಕ ಪೀಟರ್ ಮುಖರ್ಜಿ ಪ್ರಕರಣದ ಇತರ ಆರೋಪಿಗಳಾಗಿದ್ದಾರೆ. ಇವರಿಬ್ಬರೂ ತಮ್ಮ ಪುತ್ರಿ ಶೀನಾ ಬೋರಾ ಹತ್ಯೆಗೆ ಸಂಬಂಧಪಟ್ಟಂತೆ ಜೈಲು ಸೇರಿದ್ದಾರೆ
