ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ನೂತನವಾಗಿ ಸ್ಥಾಪಿಸಲಾಗಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಅ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದು, ವಿಧಾನಸೌಧದ ಮೆಟ್ಟಿಲುಗಳ ಮುಂದೆ ನಡೆಯುವ ವಾಲ್ಮೀಕಿ ಜಯಂತಿಯಲ್ಲಿ ಒಂದೂವರೆ ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರು: ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ನೂತನವಾಗಿ ಸ್ಥಾಪಿಸಲಾಗಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಅ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದು, ವಿಧಾನಸೌಧದ ಮೆಟ್ಟಿಲುಗಳ ಮುಂದೆ ನಡೆಯುವ ವಾಲ್ಮೀಕಿ ಜಯಂತಿಯಲ್ಲಿ ಒಂದೂವರೆ ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ.

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಸಹಕಾರ ಸಚಿವ ರಮೇಶ್ ಜಾರಕಿಹೊಳಿ ಹಾಗೂ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರು ನಡೆಸಿದ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಪುತ್ಥಳಿ ಅನಾವರಣದ ಹಿನ್ನೆಲೆಯಲ್ಲಿ ಈ ಬಾರಿ ವಾಲ್ಮೀಕಿ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು, ಕೇವಲ ನಾಯಕ ಜನಾಂಗದ ಜನರಲ್ಲದೇ ಸುಮಾರು ಇತರೆ ಸಮುದಾಯಗಳ ವಾಲ್ಮೀಕಿ ಭಕ್ತರು, ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ವಿಧಾನಸೌಧದ ಪಶ್ಚಿಮ ದ್ವಾರದ ಬಲಭಾಗದಲ್ಲಿರುವ 205 ಎಕರೆ ಮಹರ್ಷಿ ವಾಲ್ಮೀಕಿ ತಪೋವನದಲ್ಲಿ ಲೋಕಾರ್ಪಣೆಗೊಳ್ಳಲಿರುವ ವಾಲ್ಮೀಕಿ ಪುತ್ಥಳಿಗೆ 25 ಮೆಟ್ರಿಕ್ ಟನ್ ಕಪ್ಪು ಶಿಲೆ ಬಳಸಲಾಗಿದೆ. ವಿಗ್ರಹ ಮತ್ತು ಪೀಠ ಸೇರಿ 12 ಅಡಿ ಎತ್ತರವಿದ್ದು, ತಮಿಳುನಾಡಿನ ಮಹಾ ಬಲಿಪುರಂನಲ್ಲಿ ತಯಾರಿಸಲಾಗಿದೆ.

ಇದಕ್ಕಾಗಿ ಒಂದು ಕೋಟಿ ರು. ವೆಚ್ಚ ಮಾಡಲಾಗಿದ್ದು, ರಾಜ್ಯ ವಾಲ್ಮೀಕಿ ಸಮಾಜದಿಂದ 50 ಲಕ್ಷ ರು.ಗಳು ಹಾಗೂ ರಾಜ್ಯ ಸರ್ಕಾರದ 50 ಲಕ್ಷ ರು.ಗಳನ್ನು ವಿನಿಯೋಗಿಸಲಾಗಿದೆ. ಪುತ್ಥಳಿ ಪ್ರತಿಷ್ಠಾಪನೆಗೊಂಡ ವಾಲ್ಮೀಕಿ ತಪೋವನದ ಸೌಂದರ್ಯೀಕರಣಕ್ಕೆ 2 ಕೋಟಿ ರು.ಗಳನ್ನು ವಿನಿಯೋಗಿಸಲಾಗುತ್ತಿದೆ. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಅನುದಾನ ನೀಡಿದೆ ಎಂದು ಶಾಸಕ ಉಗ್ರಪ್ಪ ತಿಳಿಸಿದರು.

ವಾಲ್ಮೀಕಿ ಪುತ್ಥಳಿ ಲೋಕಾರ್ಪಣೆಗೆ ಪೂರ್ವಭಾವಿಯಾಗಿ ರಾಜ್ಯಾದ್ಯಂತ ಸೆ.16ರಿಂದ ಸೆ.23ರವರೆಗೆ ರಾಜ್ಯದ 20 ಜಿಲ್ಲೆಗಳಿಗೆ ಸಚಿವ ರಮೇಶ್ ಜಾರಕಿಹೊಳಿ ಹಾಗೂ ತಮ್ಮ ನೇತೃತ್ವದಲ್ಲಿ ಪ್ರವಾಸ ಕೈಗೊಳ್ಳಲಾಗುತ್ತಿದೆ. ಈ ಜಾಗೃತಿ ಪ್ರವಾಸಕ್ಕೆ ಸಚಿವ ಜಾರಕಿಹೊಳಿ ಸ್ವಂತ ವೆಚ್ಚದಲ್ಲಿ ಹೆಲಿ ಕಾಪ್ಟರ್ ಬಳಸಲಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಜಾಗೃತಿ ಸಭೆಗಳನ್ನು ನಡೆಸಲಾಗುವುದು. ನಂತರ ಸೆ.24ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣ, ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ, ವೀರ ಸಿಂಧೂರ ಲಕ್ಷ್ಮಣ ಕ್ರಾಂತಿ ನಡೆಸಿದ ಬೆಳಗಾವಿ ಜಿಲ್ಲೆಯ ಹಲಗಲಿ ಗ್ರಾಮ ಮತ್ತು ಚಾಮರಾಜನಗರದಿಂದ ಜ್ಯೋತಿ ಯಾತ್ರೆಗಳು ಹೊರಡಲಿವೆ. ಜ್ಯೋತಿ ಯಾತ್ರೆ ರಾಜ್ಯಾದ್ಯಂತ ಸಂಚರಿಸಿದ ಬಳಿಕ ಅಕ್ಟೋಬರ್ 4ರಂದು ಬೆಂಗಳೂರು ತಲುಪಲಿವೆ. ಮರುದಿನ ಅ.5ರಂದು ಬೃಹತ್ ಪ್ರಮಾಣದಲ್ಲಿ ವಾಲ್ಮೀಕಿ ಜಯಂತಿ ನಡೆಯಲಿದೆ ಎಂದು ಉಗ್ರಪ್ಪ ಹೇಳಿದರು.

ಸಚಿವ ಎಚ್.ಆಂಜನೇಯ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಗತ್ತಿಗೆ ಸಾರಿದ ಸಂದೇಶಗಳು ಕೇವಲ ಒಂದು ಜಾತಿಗೆ ಸೀಮಿತವಲ್ಲ. ರಾಜ್ಯ ಸರ್ಕಾರ ಅ.5ರಂದು ಇದೇ ಮೊದಲ ಬಾರಿಗೆ ಬ್ಯಾಂಕ್ವೆಟ್ ಹಾಲ್‌ಗೆ ಬದಲಾಗಿ ವಿಧಾನಸೌಧದ ಮುಂಭಾಗದಲ್ಲಿ ಬಹಿರಂಗ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದೆ. ಹೀಗಾಗಿ ರಾಜ್ಯದ ಎಲ್ಲೆಡೆಯಿಂದ ಎಲ್ಲ ಜಾತಿ ಜನಾಂಗದ ಜನರು ಪಾಲ್ಗೊಳ್ಳಬೇಕಾಗಿದೆ.

ಹೀಗಾಗಿಯೇ ನಾನು ಖುದ್ದಾಗಿ ಇಂದಿನ ಪೂರ್ವಭಾವಿ ಸಭೆಯಲ್ಲೂ ಪಾಲ್ಗೊಂಡಿದ್ದೇನೆ. ಕೇವಲ ನಾಯಕ ಜನಾಂಗದ ಜನರಿಗೆ ಈ ಕಾರ್ಯಕ್ರಮ ಸೀಮಿತವಾಗಬಾರದು ಎಂದು ಹೇಳಿದರು.

(ಸಾಂದರ್ಭಿಕ ಚಿತ್ರ)