ಶೀಘ್ರದಲ್ಲೇ, ಗುಡ್ಡಗಾಡು ಮತ್ತು ಎಡಪಂಥೀಯ ಉಗ್ರಗಾಮಿತ್ವ ಹರಡಿದ ಪ್ರದೇಶಗಳಿಗೂ ಮೊಬೈಲ್ ಸಂಪರ್ಕ ಜೋಡಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ನವದೆಹಲಿ(ಮಾ.10): ಒಂದೆಡೆ ಭ್ರಷ್ಟಾಚಾರ ನಿಗ್ರಹ ಮತ್ತು ವ್ಯವಹಾರದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಡಿಜಿಟಲ್ ವ್ಯವಹಾರ ನಡೆಸುವಂತೆ ಸಾರ್ವಜನಿಕರಿಗೆ ಕೇಂದ್ರ ಪ್ರೋತ್ಸಾಹ ನೀಡುತ್ತಿದೆ. ಮತ್ತೊಂದೆಡೆ ದೇಶದ ಕನಿಷ್ಠ 55 ಸಾವಿರ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವೇ ಇಲ್ಲ ಎಂಬ ವಿಚಾರವನ್ನು ಸರ್ಕಾರವೇ ಬಹಿರಂಗಪಡಿಸಿದೆ.

ಈ ಬಗ್ಗೆ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ದೂರಸಂಪರ್ಕ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ, ಯಾವೆಲ್ಲ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವಿಲ್ಲ ಎಂಬ ವಿಚಾರವನ್ನು ತಿಳಿಸುವಂತೆ ಸೂಚಿಸಿ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗಳಿಗೆ ಸಚಿವಾಲಯ ಪತ್ರ ಬರೆದಿದೆ ಎಂದು ಹೇಳಿದರು. ಆನಂತರ ಹಂತಹಂತವಾಗಿ ಆರ್ಥಿಕ ಸಂಪನ್ಮೂಲಗಳ ಲಭ್ಯತೆಯನ್ನಾಧರಿಸಿ ಮೊಬೈಲ್ ಸಿಗ್ನಲ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಓಡಿಶಾದಲ್ಲಿ ಅತಿಹೆಚ್ಚು ಗ್ರಾಮಗಳಲ್ಲಿ(10,398) ಮೊಬೈಲ್ ಸಂಪರ್ಕವಿಲ್ಲ. ಅದರ ನಂತರ ಜಾರ್ಖಂಡ್(5,949), ಮಧ್ಯಪ್ರದೇಶ(5,926), ಛತ್ತೀಸ್'ಘಡ(4,041) ಮತ್ತು ಆಂಧ್ರಪ್ರದೇಶ(3,812) ನಂತರದ ಸ್ಥಾನಗಳನ್ನು ಪಡೆದಿವೆ. ಆದರೆ ಕರ್ನಾಟಕ, ಕೇರಳ ಮತ್ತು ಪುದುಚೆರಿಯಲ್ಲಿ ಮೊಬೈಲ್ ಸಂಪರ್ಕವಿರದ ಗ್ರಾಮವೇ ಇಲ್ಲ ಎನಿಸಿಕೊಂಡಿವೆ ಎಂದು ದ ಇಂಡಿಯನ್ ಎಕ್ಸ್'ಪ್ರೆಸ್ ವರದಿ ಮಾಡಿದೆ. 

ಅಲ್ಲದೆ, ಶೀಘ್ರದಲ್ಲೇ, ಗುಡ್ಡಗಾಡು ಮತ್ತು ಎಡಪಂಥೀಯ ಉಗ್ರಗಾಮಿತ್ವ ಹರಡಿದ ಪ್ರದೇಶಗಳಿಗೂ ಮೊಬೈಲ್ ಸಂಪರ್ಕ ಜೋಡಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.