ಬೆಂಗಳೂರು[ಆ.20]: 17 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಕೊನೆಯ ಕ್ಷಣದವರೆಗೂ ಸಚಿವರು ಯಾರಾಗ್ತಾರೆ ಎಂಬುವುದು ರಹಸ್ಯವಾಗೇ ಉಳಿದಿತ್ತು. ಆದರೀಗ ಇದಕ್ಕೆ ತೆರೆ ಬಿದ್ದಿದ್ದು, ಸಚಿವರು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೊದಲ ಹಂತದಲ್ಲಿ ಸಚಿವರು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ತಮಗೂ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅತ್ತ ಪ್ರಮಾಣ ವಚನ ಕಾರ್ಯಕ್ರಮ ನಡೆಯುತ್ತಿದ್ದರೆ ಇತ್ತ ಬೆಂಬಲಿಗರು ಪ್ರತಿಭಟನೆ ಆರಂಭಿಸಿದ್ದಾರೆ.

ಹೌದು ತಮಗೂ ಸಚಿವ ಸ್ಥಾನ ಸಿಗಬಹುದು ಎಂದು ಹಲವು ನಾಯಕರು ನಿರೀಕ್ಷೆ ಇಟ್ಟುಕೊಂಡಿದ್ದರು. ಇವರಲ್ಲಿ ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಕೂಡಾ ಒಬ್ಬರು. ಆದರೀಗ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ತೀವ್ರ ಅಸಮಾಧಾನ ವ್ಯಕ್ತಡಿಸಿದ್ದಾರೆ. 'ನನಗೆ ಅನ್ಯಾಯ ಆಗಿದೆ. ಹೊರಗಿನವರೇ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಿದ್ದಾರೆ. ಹಿರಿತನ, ಪಕ್ಷನಿಷ್ಠೆ ಗುರುತಿಸಿ ಮಂತ್ರಿಗಿರಿ ನೀಡದ್ದಕ್ಕೆ ಬೇಸರವಾಗಿದೆ. ನಾನು 6 ಬಾರಿ ಶಾಸಕನಾದ್ರೂ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಾರಿ ನನ್ನನ್ನು ಪಕ್ಷದ ಮುಖಂಡರು ಕಡೆಗಣಿಸಿದ್ದಾರೆ. ನನಗೆ ಅನ್ಯಾಯವಾಗಿದೆ, ಕೆಲ ಶಾಸಕರು ಇಂದು ಬೆಂಗಳೂರಿನಲ್ಲಿ ಸೇರಿ ಚರ್ಚಿಸುತ್ತೇವೆ. ಬಿಎಸ್‌ವೈ, ಹೈಕಮಾಂಡ್ಗೆ ಮನವರಿಕೆ ಮಾಡಿಕೊಡುತ್ತೇವೆ. ರಾಜ್ಯದ ಅಭಿವೃದ್ಧಿಯಾಗಬೇಕು ಅನ್ನೋದೇ ನನ್ನ ಉದ್ದೇಶ' ಎಂದಿದ್ದಾರೆ.

ರಾಜಭವನದಲ್ಲಿ ಪ್ರಮಾಣ ವಚನ: ಸಿಎಂ ಯಡಿಯೂರಪ್ಪ ಸಂಪುಟ ಸೇರಿದ ಸಚಿವರಿವರು!

ಇತ್ತ ತಮ್ಮ ನಾಯಕ ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ಕೈತಪ್ಪಿರುವುದರಿಂದ ಆಕ್ರೋಶಿತರಾದ ಬೆಂಬಲಿಗರು ಚಿತ್ರದುರ್ಗದ ಗಾಂಧಿವೃತ್ತದಲ್ಲಿ ಟಯರ್ ಸುಟ್ಟು ಪ್ರತಿಭಟನೆ ಆರಂಭಿಸಿದ್ದಾರೆ.

ಅತ್ತ ಸುಳ್ಯ ಶಾಸಕ ಅಂಗಾರ ಕೂಡಾ ಸಚಿವರಾಗುವ ಆಕಾಂಕ್ಷೆ ಹೊತ್ತುಕೊಂಡು ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಅವರಿಗೂ ತೀವ್ರ ನಿರಾಸೆಯಾಗಿದೆ.