ಹಾಸನ[ಸೆ.05]: ಖಾಲಿಯಿರುವ ಶಿಕ್ಷಕರ ಹುದ್ದೆ ಭರ್ತಿಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ದಿಟ್ಟ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲೇ ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.

ಹಾಸನದ ಕಲಾಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ರೇವಣ್ಣ, ಶಿಕ್ಷಕರ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ಈ ಬಗ್ಗೆ ಸಿಎಂ ಹಾಗು ಸಚಿವರ ಜೊತೆ ಮಾತನಾಡೊದಾಗಿ ಭರವಸೆ ನೀಡಿದರು. 2019ರ ವೇಳೆಗೆ ಹಾಸನದಲ್ಲಿ ಐಐಟಿ[ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ] ಸ್ಥಾಪಿಸುವುದು ನಿಶ್ಚಿತ ಎಂದು ಘೋಷಿಸಿದರು.

ಪ್ರಾಥಮಿಕ ಶಿಕ್ಷಣ ಕುಸಿದುಹೋಗುತ್ತಿದೆ, ಹೀಗೆ ಆದರೆ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಬೇಕಾಗುತ್ತೆ. ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಶಿಕ್ಷಕರು ಶ್ರಮಿಸಬೇಕೆಂದು ರೇವಣ್ಣ ಕರೆ ನೀಡಿದರು. 
ಇದೇವೇಳೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜೇಗೌಡರ ಕಾಲೆಳೆದ ಸಚಿವ ರೇವಣ್ಣ, ಕಸಾಪ ಅಧ್ಯಕ್ಷರು ಕನ್ನಡಕ್ಕಾಗಿ ಹೋರಾಟ ಮಾಡ್ತೀವಿ ಅಂತಾರೆ, ಆದರೆ ಅವರ ಮಕ್ಕಳು ಇಂಗ್ಲೀಷ್ ಶಾಲೆಯಲ್ಲಿ ಓದುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.