ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ರದ್ದುಪಡಿಸಿರುವ ಸುಪ್ರಿಂಕೋರ್ಟ್ ಆದೇಶದಿಂದ ಹಾಲಿ ನೌಕರರ ಮೇಲೆ ಆಗಲಿರುವ ಪರಿಣಾಮವನ್ನು ತಪ್ಪಿಸಲು ಹಾಗೂ ನೇಮಕಾತಿ ಮತ್ತು ಬಡ್ತಿ ವೇಳೆ ಮೀಸಲಾತಿ ನೀಡುವ ಸಂಬಂಧದ ಲೋಪದೋಷ ಸರಿಪಡಿಸುವಂತಹ ನೀತಿ ರೂಪಿಸಿ ಸುಗ್ರಿವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. 

ಬೆಂಗಳೂರು (ಆ.04): ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ರದ್ದುಪಡಿಸಿರುವ ಸುಪ್ರಿಂಕೋರ್ಟ್ ಆದೇಶದಿಂದ ಹಾಲಿ ನೌಕರರ ಮೇಲೆ ಆಗಲಿರುವ ಪರಿಣಾಮವನ್ನು ತಪ್ಪಿಸಲು ಹಾಗೂ ನೇಮಕಾತಿ ಮತ್ತು ಬಡ್ತಿ ವೇಳೆ ಮೀಸಲಾತಿ ನೀಡುವ ಸಂಬಂಧದ ಲೋಪದೋಷ ಸರಿಪಡಿಸುವಂತಹ ನೀತಿ ರೂಪಿಸಿ ಸುಗ್ರಿವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. 

ವಿಧಾನಸೌಧದಲ್ಲಿ ಶುಕ್ರವಾರ ಕಾನೂನು ಸಚಿವ ಟಿ.ಬಿ ಜಯಚಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಉಪ ಸಮಿತಿಯ ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರತ್ನಪ್ರಭ ಸಮಿತಿ ನೀಡಿರುವ ವರದಿಯನ್ನು ಪರಿಶೀಲಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೆಲವು ಇಲಾಖೆಗಳಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಇನ್ನು ಮುಂದೆ ಬಡ್ತಿ ಮತ್ತು ನೇಮಕಾತಿ ಸಂದರ್ಭದಲ್ಲಿ ಮೀಸಲಾತಿ ಅನುಪಾತವನ್ನು ಮೀರದಂತೆ ಅಗತ್ಯಕ್ರಮ ಕೈಗೊಳ್ಳುವ ಕರಡನ್ನು ಮುಂದಿನ ಸಂಪುಟ ಸಭೆ ಮುಂದೆ ಮಂಡಿಸಲು ಸಭೆ ನಿರ್ಧರಿಸಿತು ಎಂದು ಕಾಗೋಡು ತಿಳಿಸಿದರು. 
ಈ ಹಿಂದೆ ಬಡ್ತಿ ನೀಡುವ ವೇಳೆ ಕೆಲವು ಇಲಾಖೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಮೀಸಲಾತಿ ನೀಡಿರುವ ಅಂಶವನ್ನು ಕಾನೂನು ಇಲಾಖೆ ಪರಾಮರ್ಶಿಸಿ ಸೂಕ್ತ ತಿದ್ದುಪಡಿಗೆ ಸಲಹೆ ಮಾಡಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ಗಡುವು ಮೀರುವ ಮುನ್ನವೇ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ತರಲು ಉಪ ಸಮಿತಿ ಒಪ್ಪಿಗೆ ನೀಡಿದೆ. ಇನ್ನು ಮುಂದೆ ಯಾವುದೇ ಇಲಾಖೆಗಳಲ್ಲಿ ನೇಮಕ ಮತ್ತು ಬಡ್ತಿ ಸಂದರ್ಭದಲ್ಲಿ ಮೀಸಲಾತಿ ಅನುಪಾತದ ಉಲ್ಲಂಘನೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗುವುದು. ಈಗಾಗಲೇ ಬಡ್ತಿ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರನ್ನು ಹಿಂಬಡ್ತಿ ಮಾಡುವ ಉದ್ದೇಶ ಇಲ್ಲ ಎಂಬುದು ಹೊಸ ಕಾನೂನಿನಲ್ಲಿ ಅಡಕವಾಗಿರುತ್ತದೆ ಎಂದು ವಿವರಿಸಿದರು. ಇನ್ನು ಮುಂದೆ ಎಲ್ಲಾ ಇಲಾಖೆಗಳ ನೇಮಕಾತಿ ಸಂದರ್ಭದಲ್ಲಿ ಮೀಸಲಾತಿ ಅನುಪಾತ ಉಲ್ಲಂಘನೆಯಾಗದಂತೆ ಕ್ರಮ ಜರುಗಿಸುವುದರ ಜೊತೆಗೆ ಬಡ್ತಿ ಸಂದರ್ಭದಲ್ಲೂ ಅದೇ ನಿಯಮವನ್ನು ಮುಂದುವರಿಸಲು ಹೊಸ ಕಾನೂನು ತರಲಾಗುತ್ತಿದೆ ಎಂದರು.