13 ಮಂದಿಯನ್ನು ಒಳಗೊಂಡ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ನಿಯೋಗ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯನ್ನು ಭೇಟಿ ಮಾಡಿ ಇವಿಎಂ ವಿವಾದ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಎದ್ದಿರುವ ಹಿಂಸಾಚಾರ, ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಬಗ್ಗೆ ವಿವರ ಸಲ್ಲಿಸಿದರು.
ನವದೆಹಲಿ (ಏ.12): 13 ಮಂದಿಯನ್ನು ಒಳಗೊಂಡ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ನಿಯೋಗ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯನ್ನು ಭೇಟಿ ಮಾಡಿ ಇವಿಎಂ ವಿವಾದ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಎದ್ದಿರುವ ಹಿಂಸಾಚಾರ, ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಬಗ್ಗೆ ವಿವರ ಸಲ್ಲಿಸಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಹಾಗೂ ಹಿರಿಯ ನಾಯಕ ಗುಲಾಂ ನಬಿ ಅಜಾದ್ ವಿವರವಾದ ಮನವಿ ಪತ್ರ ಸಲ್ಲಿಸಿ ಈ ವಿಚಾರಗಳಲ್ಲಿ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.
ದೇಶದಲ್ಲಿ ಅಭದ್ರತೆ ವಾತಾವರಣವಿದೆ.ರಾಜಸ್ಥಾನದ ಅಲ್ವಾರ್, ಜಾರ್ಖಂಡ್, ಗುಜರಾತ್, ಪುಣೆ, ದಾದ್ರಿ, ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರ ಪ್ರಕರಣಗಳು ನಡೆದಿವೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಇತ್ತೀಚಿಗೆ ಚುನಾವಣೆ ನಡೆದ ಮಣಿಪುರ ಹಾಗೂ ಗೋವಾ ಇದಕ್ಕೆ ಸ್ಪಷ್ಟ ಉದಾಹರಣೆ ಎಂದು ಪ್ರತಿಪಕ್ಷಗಳ ನಿಯೋಗ ಹೇಳಿದೆ.
ಐತಿಹಾಸಿಕ ಶಿಕ್ಷಣ ಸಂಸ್ಥೆಗಳಾದ ನಲಂದಾ ವಿಶ್ವವಿದ್ಯಾಲಯ, ನೆಹರು ವಿವಿಯಲ್ಲಿ ಹಿಂಸಾಚಾರ, ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೆಮೋರೆಂಡಮ್ ನಲ್ಲಿ ತಿಳಿಸಲಾಗಿದೆ.
