ಆ ಮುಂಡಗಳಿಗೆ ಬಾಂಬ್'ಗಳನ್ನು ಫಿಕ್ಸ್ ಮಾಡಲಾಯಿತು. ಆ ದೇಹವನ್ನು ಯಾರಾದರೂ ಎತ್ತಿದರೆ ಆ ಬಾಂಬ್ ಸ್ಫೋಟಗೊಳ್ಳುವಂತೆ ಇಡಲಾಗಿತ್ತು. ಇನ್ನಷ್ಟು ಪಾಕ್ ಸೈನಿಕರನ್ನು ಹತ್ಯೆಗೈಯ್ಯುವುದು ಭಾರತೀಯ ಸೈನಕರ ಉದ್ದೇಶವಾಗಿತ್ತು.

ಕೆಲ ದಿನಗಳ ಹಿಂದೆ ಪಾಕಿಸ್ತಾನದ ಗಡಿಭಾಗದಲ್ಲಿರುವ ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್(ನಿರ್ದಿಷ್ಟ ಗುರಿ) ದಾಳಿ ಬಹಳ ದೊಡ್ಡ ಸುದ್ದಿ ಮಾಡಿದೆ. ಭಾರತೀಯ ಸೇನೆಯಿಂದ ಇಂಥ ಗಡಿಯೋತ್ತರ ಕಾರ್ಯಾಚರಣೆ ನಡೆದಿರುವುದು ಇದೇ ಮೊದಲಲ್ಲ. 2011ರಲ್ಲಿ ಪಾಕಿಸ್ತಾನ ಮತ್ತು ಭಾರತ ದೇಶಗಳು ಪರಸ್ಪರರ ಮೇಲೆ ಇಂಥ ಸರ್ಜಿಕಲ್ ದಾಳಿ ನಡೆಸಿರುವುದುಂಟು. ಪಾಕಿಸ್ತಾನಕ್ಕೆ ಆ ಸಂದರ್ಭದಲ್ಲಿ ಭಾರತ ಸಖತ್ ಪಾಠ ಕಲಿಸಿತ್ತು. ಆ ಕಾರ್ಯಾಚರಣೆಗಳ ವಿವರ ಇರುವ ಅಧಿಕೃತ ದಾಖಲೆಗಳು ತನ್ನ ಬಳಿ ಇವೆ ಎಂದು ದ ಹಿಂದೂ ಪತ್ರಿಕೆ ಹೇಳಿಕೊಂಡಿದೆ. ಪತ್ರಿಕೆಯ ವರದಿಗಾರರಾದ ವಿಜೇತಾ ಸಿಂಗ್ ಮತ್ತು ಜೋಸಿ ಜೋಸೆಫ್ ಅವರು ಆ ರೋಚಕ ಕಾರ್ಯಾಚರಣೆಯ ವಿವರವನ್ನು ಓದುಗರಿಗೆ ಒದಗಿಸಿದ್ದಾರೆ.

ಪಾಕಿಸ್ತಾನದ ಸೈನಿಕರು ಭಾರತೀಯ ಗಡಿಗೆ ನುಗ್ಗಿ ಇಬ್ಬರು ಸೈನಿಕರ ತಲೆ ಕಡಿದುಕೊಂಡು ಹೋಗಿದ್ದ ಘಟನೆ ಬಹಳಷ್ಟು ಜನರಿಗೆ ನೆನಪಿರಬಹುದು. ಅಷ್ಟಾದರೂ ಸರಕಾರ ಏನೂ ಪ್ರತೀಕಾರ ತೀರಿಸಿಕೊಳ್ಳಲಿಲ್ಲ ಎಂಬ ಟೀಕೆಗಳು ವ್ಯಾಪಕವಾಗಿ ಕೇಳಿಬಂದಿದ್ದವು. ಆದರೆ, ವಾಸ್ತವದಲ್ಲಿ ಪಾಕಿಸ್ತಾನದ ಆ ನರಿಬುದ್ಧಿಯ ಕಾರ್ಯಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ಕೊಟ್ಟಿದ್ದು ಅನೇಕರಿಗೆ ತಿಳಿದಿಲ್ಲ. ಮೇಜರ್ ಜನರಲ್ ಎಸ್.ಕೆ.ಚಕ್ರವರ್ತಿ ನೇತೃತ್ವದಲ್ಲಿ ಭಾರತೀಯ ಸೇನೆಯು ಆಪರೇಷನ್ ಜಿಂಜರ್ ಮೂಲಕ ಪಾಕಿಸ್ತಾನದ ಸೈನಿಕರಿಗೆ ಬಿಸಿಮುಟ್ಟಿಸಿತ್ತು. ಅಲ್ಲದೇ, ಮೂವರು ಪಾಕಿಸ್ತಾನೀ ಸೈನಿಕರ ತಲೆ ಕತ್ತರಿಸಿ ಎತ್ತಿಕೊಂಡು ಬಂದಿತ್ತು.

ಮೊದಲಿಗೆ ಕೆಣಕಿದ್ದು ಪಾಕಿಸ್ತಾನ:
ಅದು 2011ರ ಜುಲೈ 30 ಮಧ್ಯಾಹ್ನದ ಸಮಯ. ಕುಪ್ವಾರಾದ ಗುಗಾಲ್'ಧರ್'ನ ಸೇನಾ ನೆಲೆಯ ಮೇಲೆ ಪಾಕಿಸ್ತಾನದ ಗಡಿ ಕಾರ್ಯಾಚರಣೆ ತಂಡ(ಬ್ಯಾಟ್) ಏಕಾಏಕಿ ದಾಳಿ ನಡೆಸುತ್ತದೆ. ಆಗ ಭಾರತೀಯ ಸೇನಾ ತುಕಡಿಗಳ ಡ್ಯೂಟಿ ಬದಲಾವಣೆಯ ಸಮಯವಾದ್ದರಿಂದ ಸೈನಿಕರಿಗೆ ದಿಢೀರ್ ಶತ್ರು ದಾಳಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಅಲ್ಲಿದ್ದ ಆರು ಭಾರತೀಯ ಸೈನಿಕರ ಮೇಲೆ ಪಾಕ್ ಯೋಧರು ಎರಗಿ ಬೀಳುತ್ತಾರೆ. ಹವಾಲ್ದಾರ್ ಜೈಪಾಲ್ ಸಿಂಗ್ ಅಧಿಕಾರಿ ಮತ್ತು ಲ್ಯಾನ್ಸ್ ನಾಯ್ಕ್ ದೇವೇಂದರ್ ಸಿಂಗ್ ಅವರು ಸ್ಥಳದಲ್ಲೇ ವೀರಮರಣವನ್ನಪ್ಪುತ್ತಾರೆ. ಉಳಿದವರಿಗೆ ಗಾಯವಾಗುತ್ತದೆ. ಜೈಪಾಲ್ ಸಿಂಗ್ ಮತ್ತು ದೇವೇಂದರ್ ಸಿಂಗ್ ಅವರ ತಲೆ ಕತ್ತರಿಸಿ ಅದನ್ನು ಪಾಕಿಸ್ತಾನಕ್ಕೆ ಹೊತ್ತೊಯ್ಯುತ್ತಾರೆ. ಮತ್ತೊಬ್ಬ ಭಾರತೀಯ ಯೋಧ ಆಸ್ಪತ್ರೆಯಲ್ಲಿ ಸಾವನ್ನಪ್ಪುತ್ತಾನೆ.

ಗೊತ್ತಾಗಿದ್ದು ಹೇಗೆ?
ಪಾಕಿಸ್ತಾನದ ಕಾರ್ಯಾಚರಣೆ ನಡೆದ ಕೆಲ ದಿನಗಳ ಬಳಿಕ ಪಾಕ್ ಉಗ್ರಗಾಮಿಯೊಬ್ಬ ಗಡಿಯಲ್ಲಿ ಒಳನುಸುಳುವ ವೇಳೆ ಭದ್ರತಾ ಪಡೆಗಳ ಎನ್'ಕೌಂಟರ್'ನಲ್ಲಿ ಹತ್ಯೆಯಾಗಿದ್ದ. ಆತನ ಬಳಿ ವಿಡಿಯೋ ಕ್ಲಿಪಿಂಗ್'ವೊಂದು ಸಿಕ್ಕಿತ್ತು. ಅದರಲ್ಲಿ ಇಬ್ಬರು ಭಾರತೀಯರ ಸೈನಿಕರ ತಲೆಯನ್ನಿಟ್ಟುಕೊಂಡು ಪಾಕಿಸ್ತಾನೀಯರು ನಿಂತಿರುವ ದೃಶ್ಯವಿತ್ತು ಎಂದು ಹಿಂದೂ ಪತ್ರಿಕೆಯ ವರದಿಗಾರರು ತಿಳಿಸಿದ್ದಾರೆ. ಅಲ್ಲಿಗೆ ಪಾಕಿಸ್ತಾನದ ಸೈನಿಕರು ತಮ್ಮವರ ತಲೆ ಕಡಿದಿದ್ದಕ್ಕೆ ಭಾರತೀಯ ಸೇನೆಗೆ ಸ್ಪಷ್ಟ ಸಾಕ್ಷ್ಯ ಸಿಕ್ಕಿತ್ತು.

ಭಾರತೀಯರ ಸೇಡಿಗೆ ಸೇಡು: ಆಪರೇಷನ್ ಜಿಂಜರ್
ಪಾಕಿಸ್ತಾನದ ಈ ಘೋರ ಕೃತ್ಯ ಭಾರತೀಯರನ್ನು ರೊಚ್ಚಿಗೆಬ್ಬಿಸಿತ್ತು. ಪಾಕಿಸ್ತಾನ ವಿರುದ್ಧ ತಕ್ಕ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆ ಯೋಜನೆ ಹಾಕಿತು. ಸೇನಾ ಕಾರ್ಯಾಚರಣೆಗೆ ಮಂಗಳವಾರ ತುಂಬಾ ಒಳ್ಳೆಯ ದಿನ ಎಂಬ ನಂಬಿಕೆ ಭಾರತೀಯ ಸೈನಿಕರಲ್ಲಿರುವುದರಿಂದ ಮಂಗಳವಾರದಂದೇ ಕಾರ್ಯಾಚರಣೆ ನಡೆಸಲು ನಿಗದಿ ಮಾಡಲಾಯಿತು. ಆಗಸ್ಟ್ 30ರಂದು ಆಪರೇಷನ್ ಜಿಂಜರ್ ನಡೆಸಲು ನಿರ್ಧರಿಸಲಾಯಿತು. ಅದು ಮಂಗಳವಾರವಷ್ಟೇ ಅಲ್ಲ, ಈದ್ ಹಬ್ಬದ ಹಿಂದಿನ ದಿನವೂ ಆಗಿದ್ದರಿಂದ ಕಾರ್ಯಾಚರಣೆ ನಡೆಸಲು ಪ್ರಶಸ್ತವಾದ ದಿನವಾಗಿತ್ತು ಎಂದು ಮೇಜರ್ ಜನರಲ್ ಎಸ್.ಕೆ.ಚಕ್ರವರ್ತಿ ತಮಗೆ ವಿವರಿಸದರೆಂದು ಹಿಂದೂ ಪತ್ರಿಕೆ ವರದಿ ಮಾಡಿದೆ.

ಹೆಚ್ಚು ಭದ್ರತೆ ಇಲ್ಲದ ಮೂರು ಪಾಕಿಸ್ತಾನೀ ಸೇನಾ ನೆಲೆಗಳನ್ನು ದಾಳಿಗೆ ಟಾರ್ಗೆಟ್ ಎಂದು ಗುರುತಿಸಲಾಯಿತು. ಜೋರ್ ಪ್ರದೇಶದಲ್ಲಿರುವ ಪೊಲೀಸ್ ಚೌಕಿ ಮೇಲೆ ದಾಳಿ ನಡೆಸಲು ಯೋಜನೆ ಹಾಕಲಾಯಿತು. ಕಾರ್ಯಾಚರಣೆಗೆ ಪ್ಯಾರಾ ಕಮಾಂಡೋ ಪಡೆಯ 25 ಸೈನಿಕರು ಅಣಿಗೊಂಡರು. ಆಗಸ್ಟ್ 29ರ ರಾತ್ರಿ 3ಗಂಟೆಗೆ ತಮ್ಮ ಲಾಂಚ್-ಪ್ಯಾಡ್'ಗೆ ಆಗಮಿಸಿ ರಾತ್ರಿ 10ಗಂಟೆವರೆಗೂ ಅವಿತು ಕುಳಿತಿದ್ದರು. ಬಳಿಕ ಪಾಕಿಸ್ತಾನದ ಎಲ್ಓಸಿ ಗಡಿಯನ್ನು ದಾಟಿ ಪೊಲೀಸ್ ಚೌಕಿ ಸಮೀಪ ಭಾರತೀಯ ಯೋಧರು ಸದ್ದಿಲ್ಲದೇ ಹೋದರು. ಬೆಳಗಿನ ಜಾವ 4ಗಂಟೆಯಷ್ಟರಲ್ಲಿ ದಾಳಿಗೆ ಪೂರ್ಣ ಸಿದ್ಧರಾದರು.

ಪಕ್ಕಾ ಪ್ಲಾನಿಂಗ್:
ಪೊಲೀಸ್ ಚೌಕಿ ಬಳಿ ಆಗಮಿಸುತ್ತಿದ್ದಂತೆಯೇ ಭಾರತೀಯ ಸೈನಿಕರು ಸುತ್ತಮುತ್ತಲು ಕ್ಲೇಮೋರ್ ಮೈನ್ಸ್ ಎಂಬ ಅತ್ಯಾಧುನಿಕ ರಿಮೋಟ್ ಕಂಟ್ರೋಲ್ಡ್ ಬಾಂಬ್'ಗಳನ್ನು ಇರಿಸಿದರು. ಪೂರ್ವಯೋಜನೆಯಂತೆ ಮೂರು ತಂಡಗಳಾಗಿ ಸಿದ್ಧರಾದರು. ತಮ್ಮ ಟಾರ್ಗೆಟ್ ಸ್ಥಳಕ್ಕೆ ನಾಲ್ವರು ಪಾಕ್ ಸೈನಿಕರು ಬರುತ್ತಿದ್ದಂತೆಯೇ ಭಾರತೀಯ ಯೋಧರು ಬಾಂಬ್'ಗಳನ್ನು ಸಿಡಿಸಿದರು. ಆ ನಾಲ್ವರು ಪಾಕ್ ಸೈನಿಕರು ಗಂಭೀರವಾಗಿ ಗಾಯಗೊಂಡರು. ಭಾರತೀಯರು ಅಷ್ಟಕ್ಕೆ ಬಿಡದೆ ಅವರ ಮೇಲೆ ಗ್ರಿನೇಡ್ ಮತ್ತು ಗುಂಡಿನ ದಾಳಿ ನಡೆಸಿದರು. ಒಬ್ಬ ಪಾಕ್ ಸೈನಿಕನ ದೇಹವು ಹಿಂಭಾಗದ ನೀರಿನ ತೊರೆಯ ಮೇಲೆ ಬಿದ್ದುಹೋಯಿತು. ಉಳಿದ ಮೂವರು ಸೈನಿಕರು ಶವವಾದರು. ಆ ಮೂವರು ಸೈನಿಕರ ತಲೆಗಳನ್ನು ಕತ್ತರಿಸಲಾಯಿತು. ಬಳಿಕ, ಆ ಮುಂಡಗಳಿಗೆ ಬಾಂಬ್'ಗಳನ್ನು ಫಿಕ್ಸ್ ಮಾಡಲಾಯಿತು. ಆ ದೇಹವನ್ನು ಯಾರಾದರೂ ಎತ್ತಿದರೆ ಆ ಬಾಂಬ್ ಸ್ಫೋಟಗೊಳ್ಳುವಂತೆ ಇಡಲಾಗಿತ್ತು. ಇನ್ನಷ್ಟು ಪಾಕ್ ಸೈನಿಕರನ್ನು ಹತ್ಯೆಗೈಯ್ಯುವುದು ಭಾರತೀಯ ಸೈನಕರ ಉದ್ದೇಶವಾಗಿತ್ತು.

ಇದೇ ವೇಳೆ, ಗ್ರಿನೇಡ್ ಸ್ಫೋಟ ಹಾಗೂ ಕ್ಲೇಮೋರ್ ಮೈನ್ ಸ್ಫೋಟದ ಸದ್ದು ಕೇಳಿ ಸಮೀಪದಲ್ಲಿದ್ದ ಬೇರೆ ಇಬ್ಬರು ಪಾಕ್ ಸೈನಿಕರು ಓಡಿ ಬರುತ್ತಾರೆ. ಆದರೆ, ಅಲ್ಲಿಯೆ ಅಡಗಿಕೊಂಡಿದ್ದ ಎರಡನೇ ಭಾರತೀಯ ತಂಡವು ಆ ಇಬ್ಬರು ಪಾಕ್ ಯೋಧರನ್ನು ಬಲಿ ತೆಗೆಯುತ್ತಾರೆ. ಎರಡನೇ ಭಾರತೀಯ ತಂಡದ ಮೇಲೆ ಮತ್ತಿಬ್ಬರು ಪಾಕ್ ಸೈನಿಕರು ಎರಗಲು ಯತ್ನಿಸುತ್ತಾರೆ. ಆದರೆ, ಮೂರನೇ ಭಾರತೀಯ ತಂಡವು ಕೂಡಲೇ ಕಾರ್ಯಪ್ರವೃತ್ತರಾಗಿ ಆ ಇಬ್ಬರು ಪಾಕ್ ಸೈನಿಕರನ್ನೂ ಮುಗಿಸುತ್ತಾರೆ. ಅಲ್ಲಿಗೆ ಎಂಟು ಪಾಕ್ ಸೈನಿಕರು ಹತ್ಯೆಯಾಗಿದ್ದರು.

ನಂತರ ಭಾರತೀಯ ಸೈನಿಕರು ಅಲ್ಲಿಂದ ವಾಪಸ್ ಮರಳಲು ಆರಂಭಿಸುತ್ತಾರೆ. ಅತ್ತ, ಪಾಕ್ ಸೈನಿಕರ ಗುಂಪೊಂದು ಪೊಲೀಸ್ ಚೌಕಿ ಬಳಿ ಹೋಗುತ್ತಿದ್ದುದು ಕಂಡುಬರುತ್ತದೆ. ಸ್ವಲ್ಪ ಹೊತ್ತಿನಲ್ಲಿ ಇನ್ನಷ್ಟು ಬಾಂಬ್ ಸ್ಫೋಟಗಳ ಸದ್ದು ಕೇಳಿಬರುತ್ತದೆ. ಶವಗಳಲ್ಲಿ ಹುದುಗಿಸಲಾಗಿದ್ದ ಐಇಡಿ ಬಾಂಬ್'ಗಳು ಸ್ಫೋಟಗೊಂಡಿದ್ದಂತಿತ್ತು. ಆ ಸ್ಫೋಟಕ್ಕೆ ಕನಿಷ್ಠ ಮೂವರು ಪಾಕ್ ಸೈನಿಕರಾದರೂ ಸಾವನ್ನಪ್ಪಿದ್ದರೆಂಬ ಅಂದಾಜಿದೆ. ಭಾರತೀಯರ ಸೈನಿಕರ ಆಪರೇಷನ್ ಜಿಂಜರ್'ಗೆ ಒಟ್ಟು 10ಕ್ಕೂ ಹೆಚ್ಚು ಪಾಕ್ ಸೈನಿಕರು ಹತರಾಗುತ್ತಾರೆ. ಮೂವರು ಪಾಕ್ ಸೈನಿಕರ ತಲೆಗಳು ಭಾರತದ ಗಡಿಗೆ ಬರುತ್ತವೆ.

ನಂತರ, ಪಾಕ್ ಯೋಧರ ತಲೆಗಳ ಫೋಟೋಗಳನ್ನು ಕ್ಲಿಕ್ಕಿಸಿ, ಮಣ್ಣಿನಲ್ಲಿ ಹೂಳಲಾಗುತ್ತದೆ. ಎರಡು ದಿನಗಳ ಬಳಿಕ ಹಿರಿಯ ಸೇನಾಧಿಕಾರಿಯೊಬ್ಬರು ಅಲ್ಲಿಗೆ ಬಂದು, ಹೂತಿದ್ದ ತಲೆಗಳನ್ನು ಹೊರತೆಗೆಸಿ ಅದನ್ನು ಸುಟ್ಟುಹಾಕಿಸುತ್ತಾರೆ. ನಂತರ, ಆ ಬೂದಿಯನ್ನು ಕಿಶನ್'ಗಂಗಾ ನದಿಯಲ್ಲಿ ಎಸೆಯಲಾಗುತ್ತದೆ. ಆ ಸೈನಿಕರ ಡಿಎನ್'ಎ ಯಾರಿಗೂ ಸಿಗಬಾರದೆಂದು ಆ ರೀತಿ ಮಾಡಲಾಗುತ್ತದೆ ಎಂದು ಸೇನಾ ಮೂಲಗಳು ತಮಗೆ ತಿಳಿಸಿದ್ದಾಗಿ ದ ಹಿಂದೂ ಪತ್ರಿಕೆಯ ವರದಿಯಗಾರರು ತಿಳಿಸಿದ್ದಾರೆ.

(ಮಾಹಿತಿ: ವಿಜೇತಾ ಸಿಂಗ್/ಜೋಸಿ ಜೋಸೆಫ್, ದ ಹಿಂದೂ)