ಬೆಂಗಳೂರು[ಆ.08]: ಮೈತ್ರಿ ಸರ್ಕಾರದ ಆಡಳಿತಾವಧಿಯಲ್ಲಿ ನೆಪ ಮಾತ್ರಕ್ಕೆ ಎಂಬಂತೆ ಮುಖ್ಯಮಂತ್ರಿಯಾಗಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ವೇಳೆ ನಾನು ಮತ್ತೊಬ್ಬರ ಮರ್ಜಿಯಲ್ಲಿದ್ದೆ. ಹೀಗಾಗಿ ಪಕ್ಷದ ಕಾರ್ಯಕರ್ತರಿಗೆ, ನಾಯಕರಿಗೆ ಸರಿಯಾದ ಸಹಾಯ-ಸಹಕಾರ ನೀಡಲು ಸಾಧ್ಯವಾಗಲಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಬುಧವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪಕ್ಷದ ಸಂಘಟನಾ ಸಮಾವೇಶದಲ್ಲಿ ಮಾತನಾಡಿದ ಅವರು ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ ಅನುಭವಿಸಿದ ನೋವುಗಳನ್ನು ಕಾರ್ಯಕರ್ತರ ಮುಂದೆ ಹಂಚಿಕೊಂಡರು.

ಮೈತ್ರಿ ಸರ್ಕಾರದಲ್ಲಿ ನಾನು ನೆಪ ಮಾತ್ರಕ್ಕೆ ಅನಿವಾರ್ಯ ಕಾರಣಗಳಿಂದ ಮುಖ್ಯಮಂತ್ರಿಯಾಗಿದ್ದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಅನುಕೂಲವಾಗಲಿದೆ ಎಂಬುದಾಗಿ ಜೆಡಿಎಸ್‌ ಕಾರ್ಯಕರ್ತರು, ನಾಯಕರು ಭಾವಿಸಿದ್ದರು. ಆದರೆ, ಅವರ ಆಶಯ ಈಡೇರಿಸಲು ಸಾಧ್ಯವಾಗಲಿಲ್ಲ. ನಿಗಮ-ಮಂಡಳಿಗಳಿಗೆ ಸ್ಥಾನ ನೀಡಲು ಪಕ್ಷದ ನಾಯಕರಿಗೆ ಸಹಾಯ, ಸಹಕಾರ ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಹಲವು ವರ್ಷಗಳಿಂದ ನಾವು ಯಾವ ಪಕ್ಷದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೆವೋ ಅದೇ ಪಕ್ಷದ ಜತೆಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಬೇಕಾದ ಅನಿವಾರ್ಯತೆ ಎದುರಾಯಿತು. ಪಕ್ಷದ ಕಾರ್ಯಕರ್ತರ, ನಾಯಕರ ಬೇಡಿಕೆಗಳಿಗೆ ಸ್ಪಂದಿಸಲು ಸಾಧ್ಯವಾಗಲಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮತ್ತೊಬ್ಬರ ಮುಲಾಜಿನಲ್ಲಿದ್ದೆ. ಸಹಕಾರ ಸಿಗದಿದ್ದಕ್ಕೆ ನನ್ನನ್ನು ಬೆಳೆಸಿದ ಕಾರ್ಯಕರ್ತರು ನನ್ನಿಂದ ದೂರ ಸರಿಯುತ್ತಿದ್ದಾರೆ ಎಂಬುದು ಅರಿವಾಯಿತು. ಇದರಿಂದ ನೊಂದುಕೊಂಡು ಈ ಹಿಂದೆ ಪಕ್ಷದ ಕಚೇರಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದೆನೇ ಹೊರತು ಬೇರೆ ಯಾವ ಕಾರಣಕ್ಕೂ ನಾನು ಕಣ್ಣೀರು ಹಾಕಿದ್ದಲ್ಲ ಎಂದು ಕುಮಾರಸ್ವಾಮಿ ಹಳೆಯ ದಿನಗಳನ್ನು ಮೆಲುಕು ಹಾಕಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿದ್ದ ನಿಖಿಲ್‌ ಕುಮಾರಸ್ವಾಮಿ ಗೆಲುವು ಖಚಿತ ಎಂದು ಹಲವರು ಬೆಟ್ಟಿಂಗ್‌ ಕಟ್ಟಿದ್ದರು. ಸುಮಾರು 100 ಕೋಟಿ ರು.ಗಳಿಗಿಂತ ಹೆಚ್ಚು ಹಣ ಬೆಟ್ಟಿಂಗ್‌ ಕಟ್ಟಿದ್ದರು. ಆದರೆ, ಚುನಾವಣೆಯಲ್ಲಿ ನಿಖಿಲ್‌ ಸೋತಿದ್ದರಿಂದ ಹಲವಾರು ಕುಟುಂಬಗಳು ಬೀದಿಗೆ ಬಂದಿವೆ. ಇದೆಲ್ಲವನ್ನೂ ನಾನು ಗಮನಿಸಿದ್ದೇನೆ. ನಾನು ಕಟುಕನಲ್ಲ, ತಾಯಿ ಹೃದಯ ಇರುವವನು. ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಿ ಶಕ್ತಿಯನ್ನು ಕಳೆದುಕೊಂಡೆ. ಮುಖ್ಯಮಂತ್ರಿ ಸ್ಥಾನವನ್ನು ಬಿಡುವಾಗ ಕಣ್ಣೀರು ಹಾಕದೆ ಸಂತೋಷದಿಂದ ಹೊರಬಂದಿದ್ದೇನೆ. ಯಾಕೆಂದರೆ ನನಗೆ ಅಧಿಕಾರ ಮುಖ್ಯವಲ್ಲ, ಕಾರ್ಯಕರ್ತರು ಬೇಕು ಎಂದು ತಿಳಿಸಿದರು.

ಸಾ.ರಾ.ಮಹೇಶ್‌ ಪರ ಬ್ಯಾಟಿಂಗ್‌

ನನ್ನ ಜತೆ ಆತ್ಮೀಯವಾಗಿ ಮಾಜಿ ಸಚಿವ ಸಾ.ರಾ.ಮಹೇಶ್‌ ಇರುವುದರಿಂದ ಕೆಲವರು ಸಹಿಸದೆ ಆತನನ್ನು ವಿಲನ್‌ನಂತೆ ಕಾಣುತ್ತಿದ್ದಾರೆ ಎಂದು ಕುಮಾರಸ್ವಾಮಿ ಇದೇ ವೇಳೆ ಪರೋಕ್ಷವಾಗಿ ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ವಿರುದ್ಧ ಕಿಡಿಕಾರಿದರು.

ನನ್ನಿಂದ ಮಹೇಶ್‌ಗೆ ಬಿಡಿಗಾಸು ಸಹಾಯವಾಗಿಲ್ಲ. ಈ ಬಗ್ಗೆ ಯಾರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳುವುದಿಲ್ಲ. ಮೈಸೂರು ಜಿಲ್ಲೆಯಲ್ಲಿ ಒಂದೇ ಒಂದು ವರ್ಗಾವಣೆಯಾಗಿಲ್ಲ. ನನಗೆ ಹತ್ತಿರವಾಗಿರುವುದೇ ತಪ್ಪಾ? ಇದಕ್ಕಾಗಿ ಇಲ್ಲದ ಅಪಾದನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.