ಕರ್ನಾಟಕದಲ್ಲಿ ರೈತರಿಗೆ ಸಾಲ ಮನ್ನಾ ಮಾಡಿದ್ದು ಫ್ಯಾಷನ್‌ ಆಗುವುದಾದರೆ ಉತ್ತರಪ್ರದೇಶ, ಮಹಾರಾಷ್ಟ್ರ ಸರ್ಕಾರಗಳು ಸಾಲ ಮನ್ನಾ ಮಾಡದೆ ಬರೀ ಘೋಷಣೆ ಮಾಡಿದ್ದು ಫ್ಯಾಷನ್‌ ಅಲ್ಲವೇ?. ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯಲ್ಲಿ ಸಾಲ ಮನ್ನಾ ಘೋಷಣೆ ಮಾಡಿತ್ತು. ಆದರೆ ಸಾಲ ಮನ್ನಾ ಮಾಡಿಲ್ಲ. ಆದರೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿಲ್ಲ. ಆದರೂ ಸಾಲ ಮನ್ನಾ ಮಾಡಿದೆ.ಸಿದ್ದರಾಮಯ್ಯ ಮುಖ್ಯಮಂತ್ರಿ

ಬೆಂಗಳೂರು: ನೋಟು ಅಮಾನ್ಯದಂತಹ ನಿರ್ಧಾರಗ​ಳನ್ನು ಸರ್ವಾಧಿಕಾರಿ ಸರ್ಕಾರಗಳು ಮಾತ್ರ ಮಾಡಲು ಸಾಧ್ಯ. ಕೇಂದ್ರ ಸರ್ಕಾ​ರ ರಾಜಕೀಯ ಲಾಭಕ್ಕಾಗಿ ನೋ​ಟು ಅಮಾನ್ಯ ಮಾಡಿ ಜನರಿಗೆ ತೊಂದರೆ ಮಾಡಿತು ಎಂದು ಮುಖ್ಯಮಂತ್ರಿ ಸಿದ್ದ​ರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸಚಿವಾಲಯ ನೌಕರರ ಸಹಕಾರ ಸಂಘ ಶುಕ್ರವಾರ ಏರ್ಪಡಿಸಿದ್ದ ‘ಕೇಂದ್ರ ಸರ್ಕಾರದ ನೋಟು ಅಮಾನ್ಯ​ದಿಂದ ಸಹಕಾರಿ ಸಂಸ್ಥೆಗಳ ಮೇಲೆ ಮತ್ತು ಸಹಕಾರಿ ಚಳವಳಿಗಳ ಮೇಲೆ ಆದ ಪರಿಣಾಮ' ಕುರಿತ ವಿಚಾರ ಸಂಕಿರಣ​ದಲ್ಲಿ ಅವರು ಮಾತನಾಡಿದರು.

ನೋಟು ಅಮಾನ್ಯದಂತಹ ನಿರ್ಧಾರ​ಗ​ಳನ್ನು ಯಾವುದೇ ಪ್ರಜಾಪ್ರಭುತ್ವ ಸರ್ಕಾರ​ಗಳು ಮಾಡುವುದಿಲ್ಲ. ಬದಲಾಗಿ ಅಥಾರಿಟೇರಿಯನ್‌ (ಸರ್ವಾಧಿಕಾರ) ಸರ್ಕಾರ ಮಾತ್ರ ಮಾಡಲು ಸಾಧ್ಯ. ನೋಟು ಮಾನ್ಯತೆ ರದ್ದು ಮಾಡುವ ನೀತಿಗಳು ಸರ್ಕಾರದ ಅರ್ಥ ವ್ಯವಸ್ಥೆಯ ವಿಶ್ವಾಸವನ್ನೇ ಅಣಕಿಸುವಂತದ್ದು. ಇದು ಅರ್ಥ ವ್ಯವಸ್ಥೆ ಮೇಲೆ ಕೆಟ್ಟಪರಿಣಾಮ ಬೀರುತ್ತದೆ ಎಂದು ಪ್ರಸಿದ್ಧ ಅರ್ಥ​ಶಾಸ್ತ್ರಜ್ಞ, ನೋಬೆಲ್‌ ಪುರಸ್ಕೃತ ಅಮತ್ರ್ಯ ​ಸೇನ್‌ ಅವರು ಹೇಳಿದ್ದರು ಎಂದು ಸಿದ್ದರಾಮಯ್ಯ ಉಲ್ಲೇಖಿಸಿದರು.

ದೇಶದಲ್ಲಿನ ಭ್ರಷ್ಟಾಚಾರ, ಕಪ್ಪು ಹಣ ಮತ್ತು ಖೋಟಾನೋಟು ತಡೆಯಲು ನೋಟು ಮಾನ್ಯತೆ ರದ್ದು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸಮರ್ಥನೆ ನೀಡಿತ್ತು. ಅಂದರೆ ಈಗ ಕಪ್ಪು ಹಣ, ಖೋಟಾ ನೋಟು ಮತ್ತು ಭ್ರಷ್ಟಾಚಾರ ಕಡಿಮೆಯಾಗಿದೆಯೇ? ನೋಟು ಅಮಾ​ನ್ಯ​ದಿಂದ ಒಟ್ಟಾರೆ ವಾಪಸ್‌ ಬಂದಿರುವ ರೂ.17.6 ಲಕ್ಷ ಕೋಟಿ ಹಳೆ ನೋಟುಗಳ ಪೈಕಿ ಖೋಟಾ ನೋಟು ಸಿಕ್ಕಿದ್ದು ಬರೀ ರೂ. 40 ಲಕ್ಷ ಮಾತ್ರ. ಅಂದರೆ ಕೇಂದ್ರ ಸರ್ಕಾರ ನೋಟು ಅಮಾನ್ಯದಿಂದ ಏನು ಸಾಧಿಸಿದಂತಾಯಿತು ಎಂದು ಟೀಕಿಸಿದರು.

ನೋಟು ಅಮಾನ್ಯ ಘೋಷಣೆ ನಂತರ ಗೋವಾದಲ್ಲಿ ಪ್ರಧಾನ ಮಂತ್ರಿ ಭಾಷಣ ಮಾಡುತ್ತಾ, ನೋಟು ಮಾನ್ಯತೆ ರದ್ದು ಪರಿಣಾಮ ಕಪ್ಪು ಹಣ ಇರುವವರಿಗೆ ನಡುಕ ಬಂದಿದೆ ಎಂದರು. ಆದರೆ ನಿಜಕ್ಕೂ ನಡುಗಿದವರು. ಕಷ್ಟಪಟ್ಟವರು, ಪರದಾಡಿದವರು ಬಡವರು, ಸಣ್ಣಪುಟ್ಟ ವ್ಯಾಪಾರಿಗಳು, ರೈತರು ಮಾತ್ರ. 100 ಕ್ಕೂ ಹೆಚ್ಚು ಮಂದಿ ಸತ್ತರು. ಕಪ್ಪು ಹಣ ಹೊಂದಿದ್ದ ಶ್ರೀಮಂತರು ಯಾರಾದರೂ ಸತ್ತಿದ್ದರೇ ಎಂದು ಪ್ರಶ್ನಿಸಿದರು.