ಜೆಡಿಎಸ್ ನ 8 - 9 ಶಾಸಕರಿಗೆ ಮಾತ್ರ ಮಂತ್ರಿ ಸ್ಥಾನ..?

Only 8 - 9 JDS MLAs Get Minister Post
Highlights

ಸಂಭವನೀಯ ಅಸಮಾಧಾನವನ್ನು ತಡೆಗಟ್ಟುವ ಉದ್ದೇಶದಿಂದ ಜೆಡಿಎಸ್ ತನ್ನ ಪಾಲಿಗೆ ಬಂದಿರುವ ಹನ್ನೊಂದು  ಸಚಿವ ಸ್ಥಾನಗಳ ಪೈಕಿ ಎರಡು ಅಥವಾ ಮೂರನ್ನು ಉಳಿಸಿಕೊಂಡು ಇನ್ನುಳಿದವುಗಳನ್ನು ಭರ್ತಿ ಮಾಡಲು ಮುಂದಾಗಿದೆ.

ಬೆಂಗಳೂರು :  ಸಂಭವನೀಯ ಅಸಮಾಧಾನವನ್ನು ತಡೆಗಟ್ಟುವ ಉದ್ದೇಶದಿಂದ ಜೆಡಿಎಸ್ ತನ್ನ ಪಾಲಿಗೆ ಬಂದಿರುವ ಹನ್ನೊಂದು  ಸಚಿವ ಸ್ಥಾನಗಳ ಪೈಕಿ ಎರಡು ಅಥವಾ ಮೂರನ್ನು ಉಳಿಸಿಕೊಂಡು ಇನ್ನುಳಿ ದವುಗಳನ್ನು ಭರ್ತಿ ಮಾಡಲು ಮುಂದಾಗಿದೆ. ಅಲ್ಲದೆ, ಮೊದಲ ಹಂತದಲ್ಲಿ ವಿಧಾನಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವುದು ಬೇಡ ಎಂಬ ಅಭಿಪ್ರಾಯವನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೊಂದಿದ್ದಾರೆ ಎನ್ನಲಾಗಿದ್ದು, ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಮತ್ತು ಬಿ.ಎಂ.ಫಾರೂಕ್ ಅವರಿಗೆ ಸಚಿವ ಸ್ಥಾನ ಅನುಮಾನವಾಗಿದೆ. 

ಸೋಮವಾರ ರಾತ್ರಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ದೇವೇಗೌಡರು ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ಈ ಬಗ್ಗೆ ಸುಳಿವು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸಂಪುಟಕ್ಕೆ ಜೆಡಿಎಸ್ ಪಾಳೆಯದಿಂದ ಯಾರು ಸೇರುತ್ತಾರೆ ಎಂಬುದರ ಬಗ್ಗೆ ಮಂಗಳ ವಾರ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಸಮಾಲೋಚನೆ ನಡೆಸಿ ಅಂತಿಮ ಗೊಳಿಸಲಿದ್ದಾರೆ ಎನ್ನಲಾಗಿದೆ.

ಸಚಿವ ಸ್ಥಾನಕ್ಕೆ ತೀವ್ರ ಲಾಬಿ ನಡೆಯುತ್ತಿರುವ  ಹಿನ್ನೆಲೆಯಲ್ಲಿ ಶಾಸಕಾಂಗದ ಸಭೆಯಲ್ಲಿ ಎರಡು ಹಂತವಾಗಿ ಹಂಚಿಕೆ ಮಾಡುವ ಬಗ್ಗೆ ಚರ್ಚಿಸ ಲಾಗಿದೆ. ಮೊದಲ ಹಂತದಲ್ಲಿ ಸಚಿವರಾದವರು,  2 ನೇ ಹಂತದಲ್ಲಿ ಸಚಿವ ಸಂಪುಟ ಪುನಾರಚನೆಯ ವೇಳೆ ಬೇರೆಯವರಿಗೆ ಅವಕಾಶ ನೀಡುವ ಬಗ್ಗೆ ಯೂ ಸಮಾಲೋಚನೆ ನಡೆದಿದೆ. ಕಾಂಗ್ರೆಸ್ ನಲ್ಲಿಯೂ ಇದೇ ಚಿಂತನೆ ಇರುವ ಹಿನ್ನೆಲೆ ಯಲ್ಲಿ ಜೆಡಿಎಸ್ ಸಹ ಇದೇ ಕ್ರಮ ಅನುಸರಿಸುವುದ ರಿಂದ ಪಕ್ಷದಲ್ಲಿನ ಭಿನ್ನಮತಕ್ಕೆ ಕಡಿವಾಣ ಹಾಕಲು ಸಾಧ್ಯ ಎನ್ನಲಾಗಿದೆ.

ಇನ್ನು ಬುಧವಾರ ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಪಕ್ಷಕ್ಕೆ ಲಭ್ಯವಾಗಿರುವ 11 ಖಾತೆಗಳನ್ನು ಹಂಚಿಕೆ ಮಾಡದೆ 2 - 3 ಖಾತೆಗಳನ್ನು ಉಳಿಸಿಕೊಂಡು 8 - 9  ಮಂದಿಗೆ  ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚಿಸಲಾಗಿದೆ. ಚರ್ಚೆಗೆ ಗ್ರಾಸವಾಗಿರುವ ಜೆಡಿಎಸ್
ಮುಖಂಡ ಎಚ್.ಡಿ.ರೇವಣ್ಣ ಇಂಧನ ಮತ್ತು ಲೋಕೋಪಯೋಗಿ ಇಲಾಖೆ ಮೇಲೆ ಕಣ್ಣಿಟ್ಟಿರುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ. ಎರಡು ಖಾತೆಗಳನ್ನು ರೇವಣ್ಣ ನೀಡುವ ಬಗ್ಗೆ ಚರ್ಚೆ ನಡೆದಿದೆಯಾದರೂ, ಸಭೆಯಲ್ಲಿ ಕೆಲವರಿಂದ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಪಕ್ಷದಲ್ಲಿ ಅಸಮಾಧಾನ ಹೋಗಲಾಡಿಸಲು ರೇವಣ್ಣಗೆ ಒಂದೇ ಖಾತೆ ನೀಡುವ ಕುರಿತು ಚರ್ಚಿಸಲಾಯಿತು ಎಂದು ಹೇಳಲಾಗಿದೆ. 

ಆದರೆ, ಅಂತಿಮ ತೀರ್ಮಾನವನ್ನು ಪಕ್ಷದ ವರಿಷ್ಠರ ಹೆಗಲಿಗೆ ವಹಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಖಾತೆ ಹಂಚಿಕೆಯಲ್ಲಿ ಒಂದೇ ಸಮುದಾಯಕ್ಕೆ ಆದ್ಯತೆ ನೀಡದೆ ಎಲ್ಲಾ ಸಮುದಾಯಗಳನ್ನು ಪರಿಗಣಿಸಬೇಕು ಹಾಗೂ ಪ್ರದೇಶವಾರು
ಖಾತೆಗಳು ಹಂಚಿಕೆಯಾಗಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗಿದೆ. ಪಕ್ಷವನ್ನು ಸರಿದೂಗಿಸಿಕೊಂಡು ಹೋಗಬೇಕಾದರೆ ಖಾತೆ
ಹಂಚಿಕೆಯಲ್ಲಿ ಸಮಾನತೆ ಕಾಯ್ದುಕೊಳ್ಳಬೇಕು ಎಂಬ ಅಂಶವನ್ನು ನಾಯಕರು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದಾರೆ. ಅತೃಪ್ತರಿಗೆ ಬಿಜೆಪಿ ಈಗಾಗಲೇ ಗಾಳ ಹಾಕುವ ಪ್ರಯತ್ನದಲ್ಲಿದೆ.  ಯಿಂದ ಹೆಜ್ಜೆ ಇಡಬೇಕಾದ ಅಗತ್ಯ ಇದೆ ಎಂದು ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾಗಿವೆ ಎಂದು ತಿಳಿದು ಬಂದಿದೆ.

loader