ನವದೆಹಲಿ[ಮಾ.20]: ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳು ಪ್ರಧಾನ ಮಂತ್ರಿ ಕಿಸಾನ್‌ ಯೋಜನೆ ಜಾರಿಯಡಿ ರೈತರಿಗೆ ಹಣ ಪಾವತಿಸದೇ ತಾರತಮ್ಯ ಮಾಡುತ್ತಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಮಂಗಳವಾರ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ, ರಾಜಸ್ಥಾನ ಹಾಗೂ ದೆಹಲಿ ಸರ್ಕಾರಗಳು ಒಬ್ಬನೇ ಒಬ್ಬ ರೈತನಿಗೆ ಯೋಜನೆಯಡಿ ಮೊದಲ ಕಂತಿನ 2000 ರು. ಹಣವನ್ನು ಪಾವತಿಸಿಲ್ಲ. ಕರ್ನಾಟಕದಲ್ಲಿ ಕೇವಲ 17 ಮಂದಿ ರೈತರನ್ನು ಮಾತ್ರ ಯೋಜನೆಯ ಅಡಿಯಲ್ಲಿ ಗುರುತಿಸಲಾಗಿದೆ. ರೈತರ ಹಿತಾಸಕ್ತಿಗೆ ರಾಜಕೀಯ ಅಡ್ಡಿ ಆಗಬಾರದು ಎಂದು ಜೇಟ್ಲಿ ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ದೇಶದ 12 ಕೋಟಿ ಸಣ್ಣ ಮತ್ತು ಮಧ್ಯಮ ರೈತರಿಗೆ ಪ್ರತಿ ವರ್ಷ 6 ಸಾವಿರ ರು.ಹಣವನ್ನು 3 ಕಂತುಗಳಲ್ಲಿ ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು.