ನೋಂದಣಿ ಮತ್ತು ಮುದ್ರಾಂಕ ಇಲಾಖೆ ವತಿಯಿಂದ ಆನ್‌ಲೈನ್ ಮೂಲಕ ಆಸ್ತಿ ಕ್ರಯಪತ್ರ ಪಡೆಯುವ ವ್ಯವಸ್ಥೆ ಪರಿಚಯಿಸುತ್ತಿದ್ದು, ಶೀಘ್ರ ಜಾರಿ ಮಾಡಲಾಗುವುದು ಎಂದು ಮುದ್ರಾಂಕ ಇಲಾಖೆ ಆಯುಕ್ತ ಡಾ.ಕೆ.ವಿ.ತ್ರಿಲೋಕ ಚಂದ್ರ ಹೇಳಿದ್ದಾರೆ.
ಬೆಂಗಳೂರು : ನೋಂದಣಿ ಮತ್ತು ಮುದ್ರಾಂಕ ಇಲಾಖೆ ವತಿಯಿಂದ ಆನ್ಲೈನ್ ಮೂಲಕ ಆಸ್ತಿ ಕ್ರಯಪತ್ರ ಪಡೆಯುವ ವ್ಯವಸ್ಥೆ ಪರಿಚಯಿಸುತ್ತಿದ್ದು, ಶೀಘ್ರ ಜಾರಿ ಮಾಡಲಾಗುವುದು ಎಂದು ಮುದ್ರಾಂಕ ಇಲಾಖೆ ಆಯುಕ್ತ ಡಾ.ಕೆ.ವಿ.ತ್ರಿಲೋಕ ಚಂದ್ರ ಹೇಳಿದ್ದಾರೆ.
ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದ ಅವರು, ಮುಂದ್ರಾಂಕ ಇಲಾಖೆ ಜನಸ್ನೇಹಿಯನ್ನಾಗಿ ಮಾಡಬೇಕಾದ ಅಗತ್ಯವಿದೆ. ಸಾಮಾನ್ಯ ಜನ ತಮ್ಮ ಆಸ್ತಿಯ ಕ್ರಯ ಪತ್ರಕ್ಕಾಗಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಕಾಯುವ ಪರಿಸ್ಥಿತಿ ಇದೆ.
ಆದ್ದರಿಂದ ವ್ಯವಸ್ಥೆಯನ್ನು ಬದಲಾವಣೆ ಮಾಡುತ್ತಿದ್ದು, ಮನೆಯಲ್ಲಿ ಕುಳಿತು ಕ್ರಯಪತ್ರ ಪಡೆಯುವ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಅಲ್ಲದೆ, ಸುಲಭ್ ನೋಂದಣಿ ವ್ಯವಸ್ಥೆಯಡಿಯಲ್ಲಿ ಆನ್ಲೈನ್ನಲ್ಲಿ ಕ್ರಯಪತ್ರಗಳನ್ನು ಅಪ್ಲೋಡ್ ಮಾಡಲಾಗುತ್ತದೆ. ನಂತರ ಆಸ್ತಿ ತೆರಿಗೆ ಮೊತ್ತದ ವಿವರ ಆನ್ಲೈನ್ಲ್ಲಿ ಲಭ್ಯವಾಗಲಿದ್ದು, ಪಾವತಿ ಮಾಡಲು ಅವಕಾಶ ಮಾಡಲಾಗುತ್ತಿದೆ ಎಂದರು. ಯೋಜನೆಯನ್ನು ಪ್ರಾಯೋಗಿಕವಾಗಿ ಬೆಂಗಳೂರು ನಗರದಲ್ಲಿ ಪರಿಚಯಿಸಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದರು.
ಆದಾಯ ಸಂಗ್ರಹದಲ್ಲಿ 3ನೇ ದೊಡ್ಡ ಇಲಾಖೆ: ರಾಜ್ಯ ಸರ್ಕಾರಕ್ಕೆ ಆದಾಯ ತಂದುಕೊಡುತ್ತಿರುವ ಇಲಾಖೆಗಳಲ್ಲಿ ಮುದ್ರಾಂಕ ಇಲಾಖೆ ಮೂರನೇ ದೊಡ್ಡ ಇಲಾಖೆಯಾಗಿದೆ. ಪ್ರಸ್ತುತ ಪ್ರತಿ ವರ್ಷ 9 ಸಾವಿರ ಕೋಟಿ ರಾಜಸ್ವವನ್ನು ಸಂಗ್ರಹಿಸುತ್ತಿದೆ. 2017 - 18ರ ಆರ್ಥಿಕ ವರ್ಷದಲ್ಲಿ 10 ಸಾವಿರ ಕೋಟಿ ಸಂಗ್ರಹದ ಗುರಿಯಿದೆ. ಮಾರ್ಚ್ ಅಂತ್ಯದ ವೇಳೆಗೆ ಗುರಿ ತಲುಪಲಾಗುವುದು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಜಿ. ಪ್ರಕಾಶ್ ಮಾತನಾಡಿ, ಪ್ರತಿ ತಿಂಗಳು 8ರಿಂದ 10 ಲಕ್ಷ ಮೌಲ್ಯದ ಸ್ಟಾಂಪ್ ಪೇಪರ್ ಮಾರಾಟ ಮಾಡುತ್ತಿದ್ದೇವೆ. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲೇ ಸಂಘ ಬೆಳೆಯುತ್ತಿದೆ. ಮುಂದೆ ಇನ್ನೂ ಎತ್ತರಕ್ಕೆ ಬೆಳೆಯಲಿದೆ ಎಂದು ಹೇಳಿದರು. ಸಂಘದ ಬೆಂಗಳೂರು ಶಾಖೆಯ ಅಧ್ಯಕ್ಷ ಬಿ.ಎಚ್. ಶಂಕರೇಗೌಡ, ಉಪಾಧ್ಯಕ್ಷ ರಂಗಸ್ವಾಮಿ, ಮಾಜಿ ಅಧ್ಯಕ್ಷ ತಪ್ಪನ್ನಗೌಡ ಸೇರಿ ಪದಾಧಿಕಾರಿಗಳು,ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
