ಬೆಂಗಳೂರು :  ಮಳೆ ಕೊರತೆಯಿಂದ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗುಜರಾತ್‌, ರಾಜಸ್ತಾನ ಮತ್ತು ಮಧ್ಯಪ್ರದೇಶಗಳಲ್ಲಿ ಈ ಬಾರಿ ಈರುಳ್ಳಿ ಇಳುವರಿ ಕುಂಠಿತಗೊಂಡಿರುವುದರಿಂದ ಮುಂಬರುವ ದಿನಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

ಮಧ್ಯವರ್ತಿಗಳು, ದಾಸ್ತಾನುದಾರರು ಬೆಳೆ ಕೊರತೆ ನೆಪವಾಗಿಸಿಕೊಂಡು ಮಾರುಕಟ್ಟೆಯಲ್ಲಿ ಈರುಳ್ಳಿಗೆ ಬೇಡಿಕೆ ಸೃಷ್ಟಿಸಲು ಮುಂದಾಗಿದ್ದಾರೆ. ರೈತರು ಸಹ ಸಂಗ್ರಹಿಸಿಟ್ಟಿರುವ ಈರುಳ್ಳಿಗೆ ಉತ್ತಮ ಬೆಲೆ ನಿರೀಕ್ಷೆಯಲ್ಲಿ ಮಾರುಕಟ್ಟೆಗೆ ತರುತ್ತಿಲ್ಲ. ಜತೆಗೆ ಮಳೆಯ ಕೊರತೆಯಿಂದಾಗಿ ಅನೇಕ ರಾಜ್ಯಗಳಲ್ಲಿ ಈ ಬಾರಿ ಇಳುವರಿ ಕುಂಠಿತವಾಗಿದೆ. ಈ ಎಲ್ಲಾ ಕಾರಣಗಳಿಂದ ಪ್ರತಿ ವರ್ಷದಂತೆ ಈ ಬಾರಿಯೂ ಹೊಸ ಬೆಳೆ ಬರುವವರೆಗೆ ಬೆಲೆ ಹೆಚ್ಚಳವಾಗಲಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ಹೆಚ್ಚಾದ ಬೆಲೆ:

ಮಳೆ ಕೊರತೆ ಹಾಗೂ ರಂಜಾನ್‌ ಹಬ್ಬದ ನಿಮಿತ್ತ ಬೆಂಗಳೂರಿನ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೊಂಚ ಏರಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ಪ್ರತಿ ಕೆ.ಜಿ. 18-20 ರು. ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ. 30ರಿಂದ 35 ರು.ವರೆಗೆ ಧಾರಣೆ ಇದೆ. ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ. 32 ರು. ನಿಗದಿಯಾಗಿದೆ.

ಮಾರುಕಟ್ಟೆಗೆ ಇತರೆ ಸಾಮಾನ್ಯ ದಿನಗಳಂತೆ ಈರುಳ್ಳಿ ಸರಬರಾಜಾಗುತ್ತಿದೆ. ಆದರೆ, ಗುಣಮಟ್ಟದ ಈರುಳ್ಳಿ ಬರುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಮಧ್ಯಮ ಈರುಳ್ಳಿ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದರೆ, ಗುಣಮಟ್ಟದ ಈರುಳ್ಳಿಗೆ ಬಹುಬೇಡಿಕೆ ಉಂಟಾಗಿದೆ. ಸದ್ಯ ರಂಜಾನ್‌ ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಬೆಲೆ ಕುದುರಿದೆ. ಕಳೆದ ಕೆಲ ತಿಂಗಳ ಹಿಂದೆ ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ. 10 ಇದ್ದ ಈರುಳ್ಳಿ, ನಂತರದ ದಿನಗಳಲ್ಲಿ 20 ರು. ಬೆಲೆ ಸ್ಥಿರತೆ ಕಾಯ್ದುಕೊಂಡಿತ್ತು. ಜೂನ್‌ ಮೊದಲ ವಾರದಲ್ಲಿ ಕೆ.ಜಿ. 26-32ರು. ಕ್ಕೆ ಹೆಚ್ಚಳವಾಗಿದೆ. ಭಾನುವಾರ ಕೆ.ಜಿ. 20 ಇದ್ದದ್ದು, ಮಂಗಳವಾರ ಕೆ.ಜಿ. 35ರು.ಗೆ ಖರೀದಿಯಾಗಿದೆ.

ಸಗಟು ಮಾರುಕಟ್ಟೆಯಲ್ಲಿ ಉತ್ತಮ ತಳಿಯ ಈರುಳ್ಳಿ ಬೆಲೆ ಪ್ರತಿ ಕೆಜಿಗೆ 18-20, ಮಧ್ಯಮ 14-15 ರು. ನಿಗದಿಯಾಗಿದೆ. ಎರಡು ದಿನಗಳಿಂದ ಶೇ.2-3ರಷ್ಟುಬೆಲೆ ಹೆಚ್ಚಾಗಿದೆ. ಎಪಿಎಂಸಿಯಲ್ಲಿ ಸಾಧಾರಣ ಈರುಳ್ಳಿ ಕ್ವಿಂಟಾಲ್‌ಗೆ ಕನಿಷ್ಠ 1000-1200ರು. ಮಧ್ಯಮ​ 1500ರು., ಉತ್ತಮ ಈರುಳ್ಳಿ 1500-1800 ರು. ನಿಗದಿಯಾಗಿದೆ. ಸೋಮವಾರ ಎಪಿಎಂಸಿಗೆ 150 ಈರುಳ್ಳಿ ಲೋಡ್‌ ಬಂದಿದೆ. ಬಿಜಾಪುರದಿಂದ 25-30 ಲೋಡ್‌ ಬರುತ್ತಿದೆ. ನಾಸಿಕ್‌, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಹಳೆ ಈರುಳ್ಳಿ ಸರಬರಾಜಾಗುತ್ತಿದೆ. ಬೆಲೆ ಏರಿಕೆ ನಿರೀಕ್ಷೆಯಲ್ಲಿ ರೈತರು ಸಹ ಈರುಳ್ಳಿ ಮಾರಾಟಕ್ಕೆ ಆಸಕ್ತಿ ತೋರುತ್ತಿಲ್ಲ. ರಾಜ್ಯದಲ್ಲಿ ಉತ್ತಮ ಮಳೆಯಾದಲ್ಲಿ ಬೆಲೆ ಇಳಿಯಲಿದೆ ಎನ್ನುತ್ತಾರೆ ಎಪಿಎಂಸಿ ಈರುಳ್ಳಿ ವರ್ತಕರಾದ ಬಿ.ರವಿಶಂಕರ್‌.

ಇತರೆ ರಾಜ್ಯಗಳಿಂದ ಈರುಳ್ಳಿ ಬರುತ್ತಿದೆ. ಈಗಾಗಲೇ ದಾಸ್ತಾನು ಮಾಡಿರುವ ಈರುಳ್ಳಿ ಕೆಟ್ಟಿರುತ್ತದೆ. ದಿನನಿತ್ಯದ ಈರುಳ್ಳಿ ಸರಬರಾಜಿನಲ್ಲಿ ವ್ಯತ್ಯಾಸವಾಗಿಲ್ಲ. ಆದರೆ, ಗುಣಮಟ್ಟಚೆನ್ನಾಗಿಲ್ಲ. ಮಧ್ಯಮ ತಳಿ ಈರುಳ್ಳಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎ.ಪ್ರಸಾದ್‌ ತಿಳಿಸಿದರು.

ಟೊಮೆಟೋ ಬೆಲೆ ಇಳಿಕೆ ಸಂಭವ

ಕೆಲ ದಿನಗಳ ಹಿಂದೆ ಗ್ರಾಹಕರಿಗೆ ಬಿಸಿ ತಟ್ಟಿದ್ದ ಟೊಮೆಟೋ ದರ ಇಳಿಕೆಯಾಗುವ ಸಾಧ್ಯತೆ ಇದೆ. ಉತ್ತಮ ಧಾರಣೆ ಕಂಡುಬಂದ ಹಿನ್ನೆಲೆ ಮಾರುಕಟ್ಟೆಗೆ ಹೆಚ್ಚಿನ ಟೊಮೊಟೋ ಸರಬರಾಜಾಗಿದೆ. ಮಂಗಳವಾರ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ. 30-40ರು.ಗೆ ಖರೀದಿಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೋ ಪ್ರತಿ ಕೆಜಿ 40-50ರವರೆಗೆ ಮಾರಾಟವಾಯಿತು. ಮುಂದಿನ ದಿನಗಳಲ್ಲಿ ಕೆ.ಜಿ. 30-35 ರು.ಗೆ ಇಳಿಕೆಯಾಗಲಿದೆ ಎಂದು ಹಾಪ್‌ಕಾಮ್ಸ್‌ ಅಧಿಕಾರಿಗಳು ಮಾಹಿತಿ ನೀಡಿದರು.