ಆರೋಪಿಯು ನಾಲ್ವರು ಉಪನ್ಯಾಸಕಿಯರಿಗೆ ‘ಐ ಲವ್‌ ಯು, ಐ ಮಿಸ್‌ ಯು, ಫ್ರೀ ಇದ್ದೀಯಾ' ಎಂದು ಆಶ್ಲೀಲ ಸಂದೇಶ ಕಳುಹಿಸಿದ್ದ

ಬೆಂಗಳೂರು: ಮಲ್ಲೇಶ್ವರದ ಖಾಸಗಿ ಕಾಲೇಜಿನ ನಾಲ್ವರು ಉಪನ್ಯಾಸಕಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿ ತಲೆಮರೆಸಿಕೊಂಡಿದ್ದ ಕಾಲೇಜಿನ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಗುಂಡ್ಲುಪೇಟೆ ಮೂಲದ ಮಹೇಂದ್ರ (20) ಬಂಧಿತ ಭದ್ರತಾ ಸಿಬ್ಬಂದಿ. ಆರೋಪಿಯು ಕಾಲೇಜಿನ ವಿದ್ಯಾರ್ಥಿ ಶಿವರಾಜ್‌ ಎಂಬುವನಿಂದ ಇಂಟರ್‌ನೆಟ್‌ ಬಳಸುವುದಾಗಿ ಮೊಬೈಲ್‌ ಪಡೆದುಕೊಂಡು ಬಳಿಕ ಅದೇ ಕಾಲೇಜಿನ ನಾಲ್ವರು ಉಪನ್ಯಾಸಕಿಯರಿಗೆ ‘ಐ ಲವ್‌ ಯು, ಐ ಮಿಸ್‌ ಯು, ಫ್ರೀ ಇದ್ದೀಯಾ' ಎಂದು ಆಶ್ಲೀಲ ಸಂದೇಶ ಕಳುಹಿಸಿದ್ದ. ಈ ಸಂಬಂಧ ಜ.13ರಂದು ಉಪನ್ಯಾಸಕಿಯೊಬ್ಬರು ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಮೊಬೈಲ್‌ ಸಂಖ್ಯೆ ಆಧರಿಸಿ ಮೊದಲಿಗೆ ಶಿವರಾಜ್‌'ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿತ್ತು. 

ಈ ಸಂದರ್ಭದಲ್ಲಿ ಶಿವರಾಜ್‌ ಉಪನ್ಯಾಸಕಿಯರಿಗೆ ಈ ಮೇಸೆಜ್‌ ತನ್ನ ಮೊಬೈಲ್‌'ನಿಂದ ಹೋಗಿದ್ದರೂ, ಅದು ತಾನು ಕಳುಹಿಸಿದ ಸಂದೇಶವಲ್ಲ ಎಂದು ತಿಳಿಸಿದ್ದ. ಜತೆಗೆ, ತನ್ನ ಮೊಬೈಲ್‌ ಅನ್ನು ಕೆಲ ಕಾಲ ಕಾಲೇಜಿನ ಭದ್ರತಾ ಸಿಬ್ಬಂದಿ ಮಹೇಂದ್ರ ಪಡೆದುಕೊಂಡಿದ್ದ ಎಂಬ ಮಾಹಿತಿಯನ್ನು ನೀಡಿದ. ಅನಂತರ ಪೊಲೀಸರು ಮಹೇಂದ್ರನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಬಿದ್ದಿದೆ. ಪೊಲೀಸರು ಮಹೇಂದ್ರನನ್ನು ಬಂಧಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

(ಕನ್ನಡಪ್ರಭ ವಾರ್ತೆ)
epaper.kannadaprabha.in