ಒಂದೆಡೆ ಕೇಂದ್ರ ಸರಕಾರ ಒಂದೇ ಬಾರಿಗೆ ಹಲವು ರಾಜ್ಯಗಳ ಚುನಾವಣೆ ನಡೆಸಬೇಕು ಎಂಬ ಮಾತುಗಳನ್ನು ಆಡುತ್ತಿದೆ. ಇದನ್ನೇ ಇನ್ನೊಂದು ಅರ್ಥದಲ್ಲಿ ಹೇಳಿರುವ ಆಯೋಗ ಒಂದು ದೇಶ ಒಂದು ಚುನಾವಣೆ ಪ್ರಸ್ತುತ ಅಸಾಧ್ಯ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದ್ದು ಇದಕ್ಕೆ ಕಾರಣವನ್ನು ನೀಡಿದೆ.
ನವದೆಹಲಿ[ಆ.29] ಒಂದು ದೇಶ ಒಂದು ಚುನಾವಣೆ ಸಾಧ್ಯವೇ ಇಲ್ಲ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಓಂ ಪ್ರಕಾಶ್ ರಾವತ್ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಓಂ ಪ್ರಕಾಶ್ ರಾವತ್, ಸದ್ಯದ ಮಟ್ಟಿಗೆ ಒಂದು ದೇಶ ಮತ್ತು ಒಂದು ಚುನಾವಣೆ ಜಾರಿ ಅಥವಾ ಅನುಷ್ಠಾನ ಕಷ್ಟಸಾಧ್ಯ. ಇದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ತರಬೇಕಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಈ ತಿದ್ದುಪಡಿಗೆ ಅನುಮೋದನೆ ನೀಡಿ ಜಾರಿಗೊಳಿಸಿದರೆ ಮಾತ್ರ ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆ ಸಾಧ್ಯವಾಗುತ್ತದೆ. ಶಾಸನ ಸಭೆಯ ಒಪ್ಪಿಗೆ ನಂತರವೇ ಇಂಥ ಕೆಲಸ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸುವ ಪರಿಕಲ್ಪನೆಗೆ ಈ ಹಿಂದೆ ಹಲವು ಸ್ಥಳೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದವು. ಆದರೆ ದೇಶದ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಈ ಬಗ್ಗೆ ನಿಲುವು ಸ್ಪಷ್ಟಪಡಿಸಿರಲಿಲ್ಲ. ಅಮಿತ್ ಶಾ ಸಹ ಒಮ್ಮೆ ನಮ್ಮ ಬೆಂಬಲ ಇದೆ ಎಂದು ಹೇಳಿದ್ದು ಬಿಟ್ಟರೆ ಯಾವ ಸ್ಪಷ್ಟ ವಿಚಾರ ಹೊರ ಬಂದಿರಲಿಲ್ಲ.
