Published : Jun 16 2017, 10:07 AM IST| Updated : Apr 11 2018, 12:42 PM IST
Share this Article
FB
TW
Linkdin
Whatsapp
ಕೋಲಾರ ಜಿಲ್ಲೆಯ ಅಂಬ್ಲಿಕಲ್‌ನಂತಹ ಕುಗ್ರಾಮದಲ್ಲಿ ಹುಟ್ಟಿಬೆಳೆದ ನಾನು ಎಸ್ಸೆಸ್ಸೆಲ್ಸಿವರೆಗೂ ಚಪ್ಪಲಿಯನ್ನೇ ತೊಟ್ಟಿರಲಿಲ್ಲ. ತುಂಬಾ ಕಷ್ಟಪಟ್ಟು ಓದಿದ್ದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎ.ಎನ್‌. ವೇಣುಗೋಪಾಲಗೌಡ ತಿಳಿಸಿದ್ದಾರೆ
ಕೋಲಾರ(ಜೂ.16): ಕೋಲಾರ ಜಿಲ್ಲೆಯ ಅಂಬ್ಲಿಕಲ್ನಂತಹ ಕುಗ್ರಾಮದಲ್ಲಿ ಹುಟ್ಟಿಬೆಳೆದ ನಾನು ಎಸ್ಸೆಸ್ಸೆಲ್ಸಿವರೆಗೂ ಚಪ್ಪಲಿಯನ್ನೇ ತೊಟ್ಟಿರಲಿಲ್ಲ. ತುಂಬಾ ಕಷ್ಟಪಟ್ಟು ಓದಿದ್ದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲಗೌಡ ತಿಳಿಸಿದ್ದಾರೆ.
ಕಾನೂನು ಪದವಿ ಸೇರಲು ಬೆಂಗಳೂರಿನ ವಿ.ವಿ.ಪುರಂ ಕಾಲೇಜಿಗೆ ಹೋಗಿದ್ದೆ. ಅಷ್ಟರಲ್ಲಾಗಲೇ ಪ್ರವೇಶಾತಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಇದರಿಂದ ಬೇಸರಗೊಂಡು ನಿಂತಿದ್ದ ನನ್ನ ಬಳಿ ಬಂದ ಕಾಲೇಜಿನ ಕ್ಲರ್ಕ್ ಹನುಮಂತೇಗೌಡ, ಒಂದು ಬಿಯರ್ ಮತ್ತು ಟಾಕೀಸಿನಲ್ಲಿ ಜ್ಯೂಲಿ' ಸಿನಿಮಾ ತೋರಿಸಿದರೆ ಸೀಟು ಕೊಡಿಸುತ್ತೇನೆ ಎಂದರು. ಒಂದಷ್ಟುಖರ್ಚು ಮಾಡಿ ಆತನ ಬೇಡಿಕೆ ಪೂರೈಸಿದೆ. ಅದು ನನ್ನ ಜೀವನದ ದಿಕ್ಕೇ ಬದಲಿಸಿತು ಎಂದು ಗೌಡರು ಸ್ಮರಿಸಿದರು.
ಹೈಕೋರ್ಟ್ ನ್ಯಾಯಮೂರ್ತಿಯಾಗಿ ಒಂದು ದಶಕ ಕಾಲ ಸೇವೆ ಸಲ್ಲಿಸಿ ಗುರುವಾರ ನಿವೃತ್ತರಾದ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲಗೌಡ ಅವರು, ಬೆಂಗಳೂರು ವಕೀಲರ ಸಂಘ ನೀಡಿದ ಬೀಳ್ಕೊಡುಗೆ ಸ್ವೀಕರಿಸಿದರು.
ನಿವೃತ್ತಿ ಬಳಿಕ ಸರ್ಕಾರ ಕೊಡಮಾಡುವ ಯಾವುದೇ ಹುದ್ದೆಯನ್ನು ನಾನು ಸ್ವೀಕರಿಸುವುದಿಲ್ಲ. ಬದಲಾಗಿ ವಕೀಲ ವೃತ್ತಿಯಲ್ಲಿಯೇ ಮುಂದುವರಿಯುತ್ತೇನೆ. ವಕೀಲ ವೃತ್ತಿಯಲ್ಲಿ ತುಂಬಾ ಸ್ವಾತಂತ್ರ್ಯವಿದೆ. ನಾನು ಮೂರು ದಶಕ ಕಾಲ ವಕೀಲನಾಗಿ, ಒಂದು ದಶಕ ಕಾಲ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ರಕ್ತ-ಉಸಿರಿನಲ್ಲಿ ವಕೀಲಿಕೆಯಿದೆ. ಹೀಗಾಗಿ ನಿವೃತ್ತಿಯಾದ ಸರ್ಕಾರ ಯಾವುದಾದರೂ ಹುದ್ದೆ ನೀಡಲು ಮುಂದೆ ಬಂದರೂ ಅದನ್ನು ಸ್ವೀಕರಿಸದೆ ವಿನಮ್ರವಾಗಿಯೇ ನಿರಾಕರಿಸುತ್ತೇನೆ. ದುರಂಹಕಾರದಲ್ಲಿ ಈ ಮಾತು ಹೇಳುತ್ತಿಲ್ಲ. ಅಲ್ಲಿ ಮುಕ್ತ ಹಾಗೂ ಉತ್ತಮ ದೃಷ್ಠಿಕೋನದಿಂದ ಕಾರ್ಯನಿರ್ವಹಿಸಲಾಗದು. ನಾನು ಕೊನೆಯವರೆಗೂ ವಕೀಲ ವೃತ್ತಿಯಲ್ಲೇ ಮುಂದುವರಿಯುತ್ತೇನೆ ಎಂದರು.
ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಮಾತನಾಡಿ, ರೈತ ಕುಟುಂಬ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದ ವೇಣುಗೋಪಾಲಗೌಡ ಅವರು, ವಕೀಲ ಮತ್ತು ನ್ಯಾಯಮೂರ್ತಿಯಾಗಿ ದಕ್ಷವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ನಿವೃತ್ತಿಯಿಂದ ಹೈಕೋರ್ಟ್ಗೆ ಮತ್ತೊಬ್ಬ ಸಮರ್ಥ ನ್ಯಾಯಮೂರ್ತಿಯ ಕೊರತೆ ಎದುರಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಉದಯ ಹೊಳ್ಳ, ಸಂಘದ ಅಧ್ಯಕ್ಷ ಎಚ್.ಸಿ. ಶಿವರಾಮು, ಕಾರ್ಯದರ್ಶಿ ಪುಟ್ಟೇಗೌಡ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಕೋರ್ಟ್ ಹಾಲ್ ಒಂದರಲ್ಲಿ ನ್ಯಾಯಮೂರ್ತಿಗಳು ಹಾಗೂ ನ್ಯಾಯಾಂಗ ಅಧಿಕಾರಿಗಳ ವೃಂದದಿಂದ ನ್ಯಾ.ವೇಣುಗೋಪಾಲ ಗೌಡರಿಗೆ ಆತ್ಮೀಯ ಬೀಳ್ಕೊಡುಗಡೆ ನೀಡಲಾಯಿತು.
ಜಡ್ಜ್ಗಳ ಸಂಖ್ಯೆ 29ಕ್ಕೆ ಇಳಿಕೆ: ನ್ಯಾ. ವೇಣುಗೋಪಾಲಗೌಡ ಅವರ ನಿವೃತ್ತಿಯಿಂದ ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 29ಕ್ಕೆ ಇಳಿದಿದೆ. ಹೈಕೋರ್ಟ್ಗೆ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆಗಳು ಮಂಜೂರಾಗಿವೆ. ಆದರೆ, ನ್ಯಾಯಮೂರ್ತಿಗಳ ನೇಮಕ ವಿಳಂಬದಿಂದ ನ್ಯಾಯಮೂರ್ತಿಗಳ ಕೊರತೆ ಸೃಷ್ಟಿಯಾಗಿದೆ. ಅಷ್ಟೇ ಅಲ್ಲದೆ, ಇದೇ ಜುಲೈ 19ರಂದು ನ್ಯಾಯಮೂರ್ತಿ ಬಿ. ಮನೋಹರ ಮತ್ತು ಆಗಸ್ಟ್ 23ರಂದು ಅಶೋಕ ಬಿ. ಹಿಂಚಿಗೇರಿ ಮತ್ತು ಅಕ್ಟೋಬರ್ನಲ್ಲಿ ಮುಖ್ಯ ನ್ಯಾಯಮೂರ್ತಿ ಮುಖರ್ಜಿ ಸಹ ನಿವೃತ್ತರಾಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.