ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ, ಅವರ ಸಂಪುಟದ ಸಚಿವರು, ಕಾಂಗ್ರೆಸ್ ಶಾಸಕರು ನಡೆಸಿದ್ದಾರೆ ಎನ್ನಲಾದ ಭ್ರಷ್ಟಾಚಾರ ಕುರಿತಂತೆ ದಾಖಲೆ ಬಿಡುಗಡೆಗೊಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇದೇ ತಿಂಗಳ 23ರ ಮುಹೂರ್ತ ನಿಗದಿಪಡಿಸಿದ್ದಾರೆ.
ಬೆಂಗಳೂರು(ಸೆ.16): ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ, ಅವರ ಸಂಪುಟದ ಸಚಿವರು, ಕಾಂಗ್ರೆಸ್ ಶಾಸಕರು ನಡೆಸಿದ್ದಾರೆ ಎನ್ನಲಾದ ಭ್ರಷ್ಟಾಚಾರ ಕುರಿತಂತೆ ದಾಖಲೆ ಬಿಡುಗಡೆಗೊಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇದೇ ತಿಂಗಳ 23ರ ಮುಹೂರ್ತ ನಿಗದಿಪಡಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಸಿದ್ದರಾಮಯ್ಯ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಯಡಿಯೂರಪ್ಪ ಗುಡುಗುತ್ತಿದ್ದರು. ಯಾವಾಗ ಎಂದು ಸುದ್ದಿಗಾರರು ಕೇಳಿದಾಗಲೆಲ್ಲ ಇನ್ನೆರಡು ದಿನಗಳಲ್ಲಿ ಎಂಬ ಉತ್ತರ ನೀಡುತ್ತಲೇ ಬಂದಿದ್ದರು. ಇದೀಗ 23ಕ್ಕೆ ಬಿಡುಗಡೆ ಮಾಡುವುದಾಗಿ ಖುದ್ದು ಯಡಿಯೂರಪ್ಪ ತಿಳಿಸಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಆಡಳಿತ ನೀಡುವುದಾಗಿ ಪದೇ ಪದೇ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಸಂಪುಟದ ಸಚಿವರು, ಶಾಸಕರು ನಡೆಸಿರುವ ಭ್ರಷ್ಟಾಚಾರದ ಕರ್ಮಕಾಂಡವನ್ನು ಬಯಲು ಮಾಡುತ್ತೇನೆ.
ನಾನು ಆಧಾರ ರಹಿತವಾಗಿ ಆರೋಪ ಮಾಡುತ್ತಿಲ್ಲ. ಪುಕ್ಕಟೆ ಪ್ರಚಾರಕ್ಕಾಗಿಯೂ ಈ ಮಾತನ್ನು ಹೇಳುತ್ತಿಲ್ಲ. ಸಮಗ್ರ ದಾಖಲೆಗಳನ್ನು ಕಲೆ ಹಾಕಿ ಬಿಡುಗಡೆ ಮಾಡುತ್ತೇನೆ ಎಂದು ಪ್ರತಿಪಾದಿಸಿದರು. ನಾನು ‘್ರಷ್ಟಾಚಾರ ಪ್ರಕರಣ ಕುರಿತು ದಾಖಲೆ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಂತೆಯೇ ಬೆಚ್ಚಿ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಕಡತಗಳನ್ನು ನಾಪತ್ತೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾತ್ರೋರಾತ್ರಿ ಕಡತಗಳನ್ನು ಮಾಯ ಮಾಡಲಾಗುತ್ತಿದೆ. ಆದರೂ ನಮ್ಮದೇ ಆದ ಮೂಲಗಳಿಂದ ಕೆಲವು ದಾಖಲೆಗಳನ್ನು ಸಂಗ್ರಹಿಸಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.
