ಭುವನೇಶ್ವರ: ಪ್ರತಿವರ್ಷ ಆಲಿವ್‌ ರಿಡ್ಲೆ ಆಮೆಗಳ ಸಾಮೂಹಿಕ ಮೊಟ್ಟೆಇಡುವ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದ್ದ ಒಡಿಶಾದ ಗಂಜಾಮ್‌ ಜಿಲ್ಲೆಯ ಋುಷಿಕುಲ್ಯಾ ರೂಕೆರಿ ಕಡಲ ತೀರಕ್ಕೆ ಈ ಬಾರಿ ಆಮೆಗಳೇ ಆಗಮಿಸಿಲ್ಲ. 

ಪ್ರತಿ ವರ್ಷ ಬೇಸಿಗೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತಿದ್ದ ಆಮೆಗಳು ಈ ಸಲ 3000ಕ್ಕಿಂತಲೂ ಕಡಿಮೆ ಮೊಟ್ಟೆಇಟ್ಟಿವೆ. ಫನಿ ಚಂಡಮಾರುತದ ಸುಳಿವು ಮೊದಲೇ ಸಿಕ್ಕಿದ್ದರಿಂದಲೇ ಅವು ಕಡಲ ತೀರಕ್ಕೆ ಆಗಮಿಸಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಒಡಿಶಾದ ಕರಾವಳಿ ಮೆಕ್ಸಿಕೊ ಮತ್ತು ಕೋಸ್ಟಾರಿಕಾ ಬಳಿಕ ಆಲಿವ್‌ ರೆಡ್ಲೆ ಆಮೆಗಳ ಮೊಟ್ಟೆಇಡುವ ಅತಿದೊಡ್ಡ ಸ್ಥಳ ಎನಿಸಿಕೊಂಡಿದೆ. 1991ರಲ್ಲಿ ಆರು ಲಕ್ಷಕ್ಕೂ ಅಧಿಕ ಆಮೆಗಳು ಒಂದು ವಾರದಲ್ಲಿ ಮೊಟ್ಟೆಇಟ್ಟಿದ್ದವು. 

ಕಳೆದ ವರ್ಷ 4.75 ಲಕ್ಷ ಆಮೆಗಳು ಮೊಟ್ಟೆಇಟ್ಟಿದ್ದವು. ಈ ಸಂಖ್ಯೆ ಈ ವರ್ಷ ಕೇವಲ 3000ಕ್ಕೆ ಇಳಿದಿದೆ. ಒಡಿಶಾ ಕರಾವಳಿಯಲ್ಲಿ ಸಾಮೂಹಿಕ ಮೊಟ್ಟೆಇಡುವ ವಿದ್ಯಮಾನ ಆರಂಭವಾಗಿದ್ದರೂ ಆಮೆಗಳು ಕಡಲ ತೀರಕ್ಕೆ ಆಗಮಿಸುತ್ತಲೇ ಇಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.