ಬಿಎಂಟಿಸಿ ಬಸ್‌ಗಳು ನಿರ್ದಿಷ್ಟ ಮಾರ್ಗದಲ್ಲಿ ಸಂಚರಿಸುವಂತೆ ಈ ಕ್ಯಾಬ್‌ಗಳು ಸಂಚರಿಸುತ್ತವೆ. ಶೇರಿಂಗ್‌ ವಿಧಾನದಲ್ಲಿ ಒಂದೇ ಸಮಯದಲ್ಲಿ ನಾಲ್ಕು ಮಂದಿ ಈ ಕ್ಯಾಬ್‌ಗಳಲ್ಲಿ ಸಂಚರಿಸಬಹುದು. ಮೊದಲ ಹಂತದಲ್ಲಿ ಹತ್ತಿ ಎರಡನೇ ಹಂತದಲ್ಲಿ ಇಳಿಯಬಹುದು ಅಥವಾ ಕೊನೆಯ ಹಂತದಲ್ಲಿ ಇಳಿಯಬಹುದು. ಆ ಮಾರ್ಗದಲ್ಲಿ ಎಲ್ಲಾದರೂ ಹತ್ತಬಹುದು.
ಬೆಂಗಳೂರು: ಟ್ಯಾಕ್ಸಿ ಸೇವೆ ನೀಡುವ ಓಲಾ ಕಂಪನಿ ಈಗ ಬಿಎಂಟಿಸಿ ಬೊಕ್ಕಸಕ್ಕೆ ಕನ್ನ ಹಾಕುವ ರೀತಿಯಲ್ಲಿ ಹೊಸ ಸೇವೆ ಆರಂಭಿಸಲು ಮುಂದಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಒಂದು ಸ್ಥಳದಿಂದ ಮತ್ತೊಂದು ಕಡೆಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಮಾದರಿಯಲ್ಲಿಯೇ ‘ಓಲಾ ಶೇರ್ ಎಕ್ಸ್ಪ್ರೆಸ್' ಸೇವೆ ಆರಂಭಿಸುವ ಮೂಲಕ ಬಿಎಂಟಿಸಿಗೆ ಸೆಡ್ಡು ಹೊಡೆದಿದೆ.
ಓಲಾ ಕಂಪನಿಯ ಮಾಮೂಲಿ ಸೇವೆಯ ವಾಹನಗಳಲ್ಲಿ ಸಂಚರಿಸುವಾಗ ಕನಿಷ್ಠ ಪ್ರಯಾಣದರ ಪಾವತಿಸಬೇಕಿತ್ತು. ಆನಂತರ ಕಿ.ಮೀ. ಪ್ರಯಾಣ ಆಧರಿಸಿ ಹಣ ಪಾವತಿ ಮಾಡುವ ವ್ಯವಸ್ಥೆ ಜಾರಿಯಲ್ಲಿತ್ತು. ಆದರೆ ಶೇರ್ ಎಕ್ಸ್ಪ್ರೆಸ್ ಬಗ್ಗೆ ಸರಳವಾಗಿ ಹೇಳುವುದಾದರೆ ಕೋರಮಂಗಲದಿಂದ ಮೆಜೆಸ್ಟಿಕ್ಗೆ ಹೋಗುವ ಓಲಾ ವಾಹನದಲ್ಲಿ ನೀವು ಪ್ರಯಾಣಿಸಿದರೆ ಕೇವಲ ಒಂದೇ ಕಿ.ಮೀ. ದೂರ ಪ್ರಯಾಣಿಸಬಹುದು. ಆದರೆ, ನೀವು ಪ್ರಯಾಣಿಸಿದ ದೂರದ ಆಧಾರದ ಮೇಲೆ ಮಾತ್ರ ದರ ಪಾವತಿಸಬೇಕಾಗುತ್ತದೆ.
ಏನಿದು ಶೇರ್ ಎಕ್ಸ್ಪ್ರೆಸ್?: ಬಿಎಂಟಿಸಿ ಬಸ್ಗಳು ನಿರ್ದಿಷ್ಟ ಮಾರ್ಗದಲ್ಲಿ ಸಂಚರಿಸುವಂತೆ ಈ ಕ್ಯಾಬ್ಗಳು ಸಂಚರಿಸುತ್ತವೆ. ಶೇರಿಂಗ್ ವಿಧಾನದಲ್ಲಿ ಒಂದೇ ಸಮಯದಲ್ಲಿ ನಾಲ್ಕು ಮಂದಿ ಈ ಕ್ಯಾಬ್ಗಳಲ್ಲಿ ಸಂಚರಿಸಬಹುದು. ಮೊದಲ ಹಂತದಲ್ಲಿ ಹತ್ತಿ ಎರಡನೇ ಹಂತದಲ್ಲಿ ಇಳಿಯಬಹುದು ಅಥವಾ ಕೊನೆಯ ಹಂತದಲ್ಲಿ ಇಳಿಯಬಹುದು. ಆ ಮಾರ್ಗದಲ್ಲಿ ಎಲ್ಲಾದರೂ ಹತ್ತಬಹುದು. ಆದರೆ ಪ್ರಯಾಣಿಸಿದ ದೂರದ ಆಧಾರದ ಮೇಲೆ ದರ ಪಾವತಿಸಬೇಕು. ಈ ಶೇರ್ ಎಕ್ಸ್'ಪ್ರೆಸ್ ಸೇವೆ ಸೇವೆ ಪಡೆಯುವವರು ಕ್ಯಾಬ್ ಸಂಚರಿಸುವ ಮಾರ್ಗದಲ್ಲಿ ತಾವೇ ತೆರಳಿ ಪ್ರಯಾಣಿಸಬೇಕು. ಮನೆಯಿಂದಲೇ ಕ್ಯಾಬ್ ಬುಕ್ ಮಾಡಿದರೂ ಕ್ಯಾಬ್ ಸಂಚರಿಸುವ ಮಾರ್ಗಕ್ಕೆ ಬರಬೇಕು.
ಬಸ್ ಸಂಚರಿಸುವ ಮಾರ್ಗದಲ್ಲಿ ಈ ಕ್ಯಾಬ್'ಗಳು ಸಂಚರಿಸುವುದರಿಂದ ಪ್ರಯಾಣಿಕರು ಕ್ಯಾಬ್ ಸೇವೆ ಪಡೆಯಲು ಮುಂದಾಗುವ ಸಾಧ್ಯತೆ ಇರುವುದರಿಂದ ಸಹಜವಾಗಿ ಬಸ್ಗಳಿಗೆ ಪ್ರಯಾಣಿಕರು ಕಡಿಮೆಯಾಗುತ್ತಾರೆ. ಅಷ್ಟರ ಮಟ್ಟಿಗೆ ಬಿಎಂಟಿಸಿಗೆ ನಷ್ಟವಾಗಲಿದೆ. ಇದಕ್ಕೂ ಮುಖ್ಯವಾಗಿ ಪರವಾನಗಿ ನಿಯಮದಲ್ಲಿ ಶೇರ್ ಎಕ್ಸ್'ಪ್ರೆಸ್'ಗೆ ಅವಕಾಶ ಇಲ್ಲದಿದ್ದರೂ ಓಲಾ ಕಂಪನಿ ಈ ಸೇವೆ ನೀಡುತ್ತಿರುವುದು ಎಲ್ಲರ ಹುಬ್ಬೇರಿಸಿದೆ.
ಓಲಾ ಶೇರ್ ಎಕ್ಸ್ಪ್ರೆಸ್ ಸೇವೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಬಸ್ ಸಂಚರಿಸುವ ಮಾರ್ಗಗಳಲ್ಲಿ ಬಸ್ನಂತೆ ಕ್ಯಾಬ್ಗಳು ಸೇವೆ ನೀಡಿದರೆ ಸಂಸ್ಥೆಯ ಬಸ್ಗಳಿಗೆ ಪ್ರಯಾಣಿಕರ ಕೊರತೆ ಉಂಟಾಗುತ್ತದೆ. ಈ ಬಗ್ಗೆ ಪರಿಶೀಲಿಸಲಾಗುವುದು.
- ಡಾ. ಏಕ್'ರೂಪ್ ಕೌರ್, ವ್ಯವಸ್ಥಾಪಕ ನಿರ್ದೇಶಕಿ, ಬಿಎಂಟಿಸಿ
ಕನ್ನಡಪ್ರಭ ವಾರ್ತೆ
epaper.kannadaprabha.in
