ಮಹಿಳೆಯರಿಗೆ ಈ ದ್ವೀಪದಲ್ಲಿ ನಿಷೇಧ; ಪುರುಷರಿಗೂ ಸೀಮಿತ ಅವಕಾಶ; ಕಡ್ಡಾಯವಾಗಿ ಬೆತ್ತಲಾಗಿ ಸ್ನಾನ ಮಾಡಬೇಕು; ಜಪಾನ್ ಸಮುದ್ರದಲ್ಲಿದೆ ಒಕಿನೋಶಿಮಾ ಎಂಬ ಈ ದ್ವೀಪ; ಅರ್ಚಕರೊಬ್ಬರಿಂದ ದ್ವೀಪದಲ್ಲಿನ ದೇವತೆಗೆ ಪೂಜೆ.
ಟೋಕಿಯೋ: ಮಹಿಳೆಯರಿಗೆ ಸಂಪೂರ್ಣ ನಿಷೇಧವಿರುವ, ಸೀಮಿತ ಪುರುಷರಿಗಷ್ಟೇ ಭೇಟಿ ನೀಡಲು ಅವಕಾಶವಿರುವ ಜಪಾನ್‌ನ ದ್ವೀಪವೊಂದನ್ನು ವಿಶ್ವ ಪಾರಂಪರಿಕ ತಾಣ ಎಂದು ಯುನೆಸ್ಕೋ ಘೋಷಿಸಿದೆ.
ಜಪಾನ್ ಸಮುದ್ರದಲ್ಲಿ ಒಕಿನೋಶಿಮಾ ಎಂಬ ದ್ವೀಪವಿದೆ. ಅರ್ಚಕರೊಬ್ಬರು ಆ ದ್ವೀಪದಲ್ಲಿನ ದೇವತೆಗೆ ಪೂಜೆ ಮಾಡುತ್ತಾರೆ. ಈ ದ್ವೀಪಕ್ಕೆ ಪುರುಷರು ಮಾತ್ರವೇ ಭೇಟಿ ನೀಡಬಹುದು. ಅದೂ ಸೀಮಿತ ಸಂಖ್ಯೆಯಲ್ಲಿ. ಭೇಟಿ ನೀಡುವ ಪುರುಷರು ಕಡ್ಡಾಯವಾಗಿ ಬೆತ್ತಲಾಗಿ ಸಮುದ್ರ ಸ್ನಾನ ಮಾಡಬೇಕು. ನಂತರವಷ್ಟೇ ದೇಗುಲಕ್ಕೆ ಕಾಲಿಡಬೇಕು ಎಂಬ ಸಂಪ್ರದಾಯವಿದೆ. ಶತಮಾನಗಳಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಇದೀಗ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಯಾಗಿರುವುದರಿಂದ ಮತ್ತಷ್ಟು ವಿದೇಶಿಗರು ಭೇಟಿ ನೀಡುವ ಸಾಧ್ಯತೆ ಇದೆ. ಆದರೆ ಈ ಘೋಷಣೆ ಹೊರಬೀಳುವ ಮೊದಲೇ, ಅರ್ಚಕರನ್ನು ಹೊರತುಪಡಿಸಿ ಮಿಕ್ಕ ಪುರುಷರಿಗೂ ದ್ವೀಪ ಪ್ರವೇಶಿಸದಂತೆ ನಿರ್ಬಂಧ ಹೇರುವ ಚಿಂತನೆ ದೇಗುಲದಲ್ಲಿ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದರೆ ದ್ವೀಪವೇ ನಾಶವಾಗಬಹುದು ಎಂಬ ಆತಂಕ ಅಲ್ಲಿನ ಅರ್ಚಕರಿಗೆ ಕಾಡುತ್ತಿದೆ.
ಈ ದ್ವೀಪದಲ್ಲಿ ವರ್ಷಕ್ಕೊಮ್ಮೆ ಹಬ್ಬ ನಡೆಯುತ್ತದೆ. ಅದೂ ಎರಡು ಗಂಟೆ ಮಾತ್ರ. ಈ ವರ್ಷ ಕೇವಲ ೨೦೦ ಪುರುಷರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿತ್ತು. ಸಮುದ್ರದಲ್ಲಿ ದೂರದೂರ ಪ್ರಯಾಣ ಮಾಡುವುದು ಅಪಾಯ ಹಾಗೂ ಮಹಿಳೆಯರು ಜನ್ಮ ನೀಡುವ ಕಾರಣ ಅವರನ್ನು ರಕ್ಷಿಸಬೇಕು ಎಂಬ ಕಾರಣಕ್ಕೆ ಈ ದ್ವೀಪದಲ್ಲಿ ಮಹಿಳೆಯರಿಗೆ ನಿಷೇಧವಿದೆ.
epaper.kannadaprabha.in
