ಪಂಚಾಯ್ತಿಗಳ ಅಧ್ಯಕ್ಷ, ಉಪಾಧ್ಯಕ್ಷರನ್ನು ದುರ್ವರ್ತನೆ, ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ ಆರೋಪದಲ್ಲಿ ಪದಚ್ಯುತಗೊಳಿಸುವ ಅವಕಾಶ ಕಲ್ಪಿಸಿದ್ದ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದ್ದ ರಾಜ್ಯ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಇದೀಗ ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ನವದೆಹಲಿ :  ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ-1993ಕ್ಕೆ ತಿದ್ದುಪಡಿ ಮಾಡುವ ಮೂಲಕ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ, ಉಪಾಧ್ಯಕ್ಷರನ್ನು ದುರ್ವರ್ತನೆ, ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ ಆರೋಪದಲ್ಲಿ ಪದಚ್ಯುತಗೊಳಿಸುವ ಅವಕಾಶ ಕಲ್ಪಿಸಿದ್ದ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದ್ದ ರಾಜ್ಯ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಇದೀಗ ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಈ ಮೂಲಕ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ದುರ್ವರ್ತನೆಯ ಆರೋಪಕ್ಕೆ ತುತ್ತಾದರೆ ತಮ್ಮ ಅಧಿಕಾರಾವಧಿಯ ಆರಂಭದ 30 ತಿಂಗಳೊಳಗೆಯೇ ಅವಿಶ್ವಾಸ ಗೊತ್ತುವಳಿಯನ್ನು ಎದುರಿಸಬೇಕಾಗುತ್ತದೆ.

ರಾಜ್ಯ ಹೈಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠವು ಅ.12ರಂದು 150 ಪುಟಗಳ ತೀರ್ಪನ್ನು ನೀಡಿ ಪಂಚಾಯತ್‌ ರಾಜ್‌ ಕಾಯ್ದೆ-1993ರ ಸೆಕ್ಷನ್‌ 49(2) ಅ ಸಿಂಧುತ್ವವನ್ನು ಎತ್ತಿ ಹಿಡಿದಿತ್ತು. ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅನೇಕ ಅರ್ಜಿಗಳು ದಾಖಲಾಗಿದ್ದವು. ಇದೀಗ ತೀರ್ಪನ್ನು ಪ್ರಶ್ನಿಸಿರುವ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಪದಚ್ಯುತಿಗೆ ಅವಕಾಶವಿರಲಿಲ್ಲ:

1993ರ ಕಾಯ್ದೆಯ ಪ್ರಕಾರ, ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಆಯ್ಕೆಗೊಂಡು ಅಧಿಕಾರ ಸ್ವೀಕರಿಸಿದ ಬಳಿಕ ಎರಡು ವರ್ಷಗಳ ಕಾಲ ಅವರನ್ನು ಯಾವುದೇ ಕಾರಣಕ್ಕೂ ಪದಚ್ಯುತಗೊಳಿಸಲು ಸಾಧ್ಯವಿರಲಿಲ್ಲ. ಹೀಗಾಗಿ 2015ರಲ್ಲಿ ಈ ಕಾಯ್ದೆಗೆ ತಿದ್ದುಪಡಿಯನ್ನು ತರಲಾಯಿತು. ಈ ಎರಡೂ ಹುದ್ದೆಗಳ ಅಧಿಕಾರಾವಧಿಯನ್ನು 2ರಿಂದ ಎರಡೂವರೆ ವರ್ಷಕ್ಕೆ(30 ತಿಂಗಳು) ವಿಸ್ತರಿಸಲಾಯಿತು. 

ಆದರೆ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ದುರ್ವರ್ತನೆಗಳಂತಹ ಗಂಭೀರ ಆರೋಪಗಳು ಕೇಳಿ ಬಂದ ಸಂದರ್ಭದಲ್ಲಿ ನಿಶ್ಚಿತ ಅಧಿಕಾರಾವಧಿಯೊಳಗೆ ಯಾವಾಗ ಬೇಕಾದರೂ ಅವಿಶ್ವಾಸ ನಿರ್ಣಯ ಮಂಡಿಸಿ ಅವರನ್ನು ಪದಚ್ಯುತಗೊಳಿಸುವ ಅವಕಾಶವನ್ನು ಪಂಚಾಯ್ತಿ ಸದಸ್ಯರಿಗೆ ನೀಡಲಾಯಿತು. ಹೀಗಾಗಿ ಪಂಚಾಯ್ತಿಯ ಒಟ್ಟು ಸದಸ್ಯರಲ್ಲಿ ಅರ್ಧದಷ್ಟುಮಂದಿ ಅವಿಶ್ವಾಸ ಗೊತ್ತುವಳಿ ಮಂಡನೆಯ ನೋಟಿಸ್‌ ಅನ್ನು ಸಂಬಂಧಿತ ವ್ಯಕ್ತಿಗೆ 10 ದಿನದ ಮೊದಲು ನೀಡುವ ಮೂಲಕ ಅವಿಶ್ವಾಸ ಮಂಡನೆಯ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದಾಗಿದೆ.

ಪಂಚಾಯ್ತಿ ಆಡಳಿತದಲ್ಲಿ ಪಾರದರ್ಶಕತೆ ತರುವಲ್ಲಿ ಈ ತಿದ್ದುಪಡಿ ಮಹತ್ವದ್ದು ಎಂದು ಬಣ್ಣಿಸಲಾಗಿತ್ತು. ಇದಾದ ಬಳಿಕ 2015ರ ಜೂನ್‌ನಲ್ಲಿ ನಡೆದು ಬಳಿಕ ಪಂಚಾಯ್ತಿ ಸದಸ್ಯರು ತಮ್ಮ ಪಂಚಾಯ್ತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪಂಚಾಯ್ತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ವಜಾಗೊಳಿಸಲು ಅವಿಶ್ವಾಸ ಮಂಡನೆ ನಡೆಸುವ ಪ್ರಯತ್ನಗಳು ನಡೆದಿದ್ದವು.

ಈ ಹಿನ್ನೆಲೆಯಲ್ಲಿ ಅವಿಶ್ವಾಸ ಮಂಡನೆಯ ಸುಳಿಗೆ ಸಿಲುಕಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ನೂರಾರು ರಿಟ್‌ ಅರ್ಜಿಗಳು ರಾಜ್ಯ ಹೈಕೋರ್ಟ್‌ನಲ್ಲಿ ದಾಖಲಾಗಿದ್ದವು. ಹೈಕೋರ್ಟ್‌ ಈ ತೀರ್ಪನ್ನು ಎತ್ತಿ ಹಿಡಿದಿತ್ತು. ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿದ ಅರ್ಜಿ ವಜಾಗೊಳಿಸುವ ಮೂಲಕ ಸುಪ್ರೀಂ ಕೋರ್ಟ್‌ ಕೂಡ ಈ ತಿದ್ದುಪಡಿಯನ್ನು ಸಿಂಧುಗೊಳಿಸಿದೆ.

ವರದಿ : ರಾಕೇಶ್‌.ಎನ್‌.ಎಸ್‌.