ನವದೆಹಲಿ (ಡಿ. 26):  ರಾಷ್ಟ್ರ ರಾಜಧಾನಿಯಲ್ಲಿ ನಿರಂತರ 4ನೇ ದಿನವೂ ವಾಯುಗುಣಮಟ್ಟ‘ಗಂಭೀರ’ ಪ್ರಮಾಣದಲ್ಲೇ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಮತ್ತೆ ಆರಂಭಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ರಾಜಧಾನಿಯಲ್ಲಿ ಮಂಗಳವಾರ ವಾಯುಗುಣಮಟ್ಟ ಸೂಚ್ಯಂಕ 416 ದಾಖಲಿಸಿತು. ಇದು ಗಂಭೀರ ಪ್ರಮಾಣದ ಸಂಕೇತ.

ಈ ಹಿನ್ನೆಲೆಯಲ್ಲಿ ಮಾತನಾಡಿದ ಕೇಜ್ರಿವಾಲ್‌, ‘ದಿಲ್ಲಿಯಲ್ಲಿ ವಾಯುಮಾಲಿನ್ಯ ತಡೆಗಾಗಿ ವೃಕ್ಷಗಳನ್ನು ನೆಡಲಾಗಿದೆ. ಸಾರ್ವಜನಿಕ ಸಾರಿಗೆಯನ್ನು ಪ್ರಚುರಪಡಿಸಲು 3 ಸಾವಿರ ಬಸ್‌ಗಳನ್ನು ಖರೀದಿಸಲಾಗಿದೆ. ಮೆಟ್ರೋದ ಅತಿ ದೊಡ್ಡ ಹಂತಕ್ಕೆ ಅನುಮೋದನೆ ನೀಡಲಾಗಿದೆ. ಅಗತ್ಯ ಬಿದ್ದರೆ ಸಮ-ಬೆಸ ಸಂಚಾರ ವ್ಯವಸ್ಥೆಯನ್ನು ಪುನಃ ಜಾರಿಗೆ ತರುತ್ತೇವೆ. ಪ್ರತಿ ವ್ಯಕ್ತಿ ಕೂಡ ಜವಾಬ್ದಾರಿ ತೆಗೆದುಕೊಳ್ಳಬೇಕು’ ಎಂದರು.

ಈ ಹಿಂದೆ 2016ರಲ್ಲಿ ಸಮ-ಬೆಸ ಸಂಚಾರ ವ್ಯವಸ್ಥೆ ಕೆಲವು ದಿನಗಳ ಮಟ್ಟಿಗೆ ಜಾರಿಯಲ್ಲಿತ್ತು. ಸಮಸಂಖ್ಯೆಯಿಂದ ಅಂತ್ಯವಾಗುವ ನಂಬರ್‌ಪ್ಲೇಟ್‌ ಉಳ್ಳ ವಾಹನಗಳು ಸಮಸಂಖ್ಯೆಯ ದಿನಾಂಕದಂದು ಹಾಗೂ ಬೆಸಸಂಖ್ಯೆಯಿಂದ ಅಂತ್ಯವಾಗುವ ನಂಬರ್‌ಪ್ಲೇಟ್‌ ಉಳ್ಳ ವಾಹನಗಳು ಬೆಸಸಂಖ್ಯೆಯ ದಿನಾಂಕದಂದು ಸಂಚರಿಸಬೇಕು ಎಂಬುದೇ ಸಮ-ಬೆಸ ನಿಯಮ.