ಮಾಸ್ಕೋ(ಆ.21): ದೇಶದ ಭದ್ರತೆಯ ಹೊಣೆ ಹೊತ್ತಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ನಿಜಕ್ಕೂ ದಣಿವರಿಯದ ಸರದಾರ. ಭಾರತದ ಭದ್ರತೆ ಹಾಗೂ ಸುರಕ್ಷತೆಗಾಗಿ ನಿರಂತರವಾಗಿ ದುಡಿಯುವ ಅವರು, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶ ವಿದೇಶ ಸುತ್ತುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ದುಗೊಂಡ ಬೆನ್ನಲ್ಲೇ, ಕಣಿವೆಯ ಭದ್ರತಾ ಉಸ್ತುವಾರಿ ಹೊತ್ತಿದ್ದ ಅಜಿತ್ ಧೋವಲ್, ಒಂದೇ ಒಂದು ಸಣ್ಣ ಭದ್ರತಾ ಲೋಪವಾಗದಂತೆ ನೋಡಿಕೊಂಡಿದ್ದು ಹೆಮ್ಮೆಪಡಬೇಕಾದ ಸಂಗತಿ.

ಕಣಿವೆ ಜವಾಬ್ದಾರಿ ಮುಗಿಸಿರುವ ಅಜಿತ್ ಧೋವಲ್ ಇದೀಗ ರಷ್ಯಾ ಪ್ರವಾಸದಲ್ಲಿದ್ದಾರೆ. ರಷ್ಯಾದ ಭದ್ರತಾ ಸಲಹೆಗಾರ ನಿಕೋಲಾಯ್ ಪತ್ರುಸೇವ್ ಅವರನ್ನು ಅಜಿತ್ ಧೋವಲ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಪೂರ್ವ ಆರ್ಥಿಕ ವೇದಿಕೆ(EEF) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇದೇ ಸೆಪ್ಟೆಂಬರ್’ನಲ್ಲಿ ಪ್ರಧಾನಿ ಮೋದಿ ರಷ್ಯಾದ ವ್ಲಾದಿವೋಸ್ಟೋಕ್’ಗೆ ಭೇಟಿ ನೀಡಲಿದ್ದಾರೆ.

ಈ ಹಿನ್ನೆಲೆಯಲ್ಲಿ ಅಜಿತ್ ಧೋವಲ್ ರಷ್ಯಾ  ಪ್ರವಾಸದಲ್ಲಿದ್ದು, ಉಭಯ ರಾಷ್ಟ್ರಗಳ ನಡುವಿನ ಭದ್ರತಾ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.