ತೈಲೆ ಬೆಲೆ ಏರಿಕೆ ವಿರುದ್ಧ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿಯೇ ಇದೀಗ ಸಬ್ಲಿಡಿ ರಹಿತ ಅಡುಗೆ ಅನಿಲ ಬೆಲೆಯೂ ಏರಿಕೆ ಆಗುತ್ತಿದೆ. ಮೋದಿ ಸರಕಾರದ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಅಡುಗೆ ಅನಿಲದ ಬೆಲೆಯೂ ಹೆಚ್ಚಾಗಿದೆ.

ನವದೆಹಲಿ: ಪೆಟ್ರೋಲ್‌, ಡೀಸೆಲ್‌ ಬೆಲೆ ಕೈಸುಡುತ್ತಿರುವ ಹೊತ್ತಿನಲ್ಲೇ, ತೈಲ ಕಂಪನಿಗಳು ಅಡುಗೆ ಅನಿಲ ಸಿಲಿಂಡರ್‌ ಬೆಲೆಯಲ್ಲಿ ಏರಿಕೆ ಮಾಡಿವೆ. ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 2.34 ರು. ಏರಿಕೆಯಾಗಿದ್ದರೆ, ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ ಭರ್ಜರಿ 48 ರು. ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಸಬ್ಸಿಡಿ ಸಹಿತ ಸಿಲಿಂಡರ್‌ ಬೆಲೆ 487 ರು.ಯಷ್ಟಿದ್ದು, ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ 650 ರು. ಆಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ತೈಲ ಕಂಪನಿಗಳು ಸತತ ಒಂದು ತಿಂಗಳು ತೈಲ ಬೆಲೆಯಲ್ಲಿ ಯಾವುದೇ ಏರಿಳಿಕೆ ಮಾಡಿರಲಿಲ್ಲ. ಆದರೆ ಫಲಿತಾಂಶ ಪ್ರಕಟವಾದ ಬಳಿಕ ಸತತ 16 ದಿನಗಳ ಕಾಲ ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಏರಿಸುತ್ತಲೇ ಬಂದಿದ್ದವು. ಇದು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಆದರೆ ಕಳೆದ ಮೂರು ದಿನಗಳಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ದಿನಕ್ಕೆ 5 ಪೈಸೆಯಂತೆ ಕಡಿಮೆಯಾಗುತ್ತಿರುವ ಹೊತ್ತಿನಲ್ಲೇ ಇದೀಗ ತೈಲ ಕಂಪನಿಗಳು ಅಡುಗೆ ಅನಿಲದ ಬೆಲೆಯಲ್ಲಿ ಏರಿಕೆ ಮಾಡಿವೆ.