ಮಹಿಳೆಯರಿಗೆ ಗುಡ್ ನ್ಯೂಸ್ : 5 ರು.ಗೆ ನ್ಯಾಪ್ ಕಿನ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Aug 2018, 9:25 AM IST
Now get Low Cost sanitary pads in Machine
Highlights

ಮಹಿಳೆಯರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್. ಅತ್ಯಂತ ಕಡಿಮೆ ದರದಲ್ಲಿ ಮಹಿಳೆಯರು ಸ್ಯಾನಿಟರಿ ನ್ಯಾಪ್ ಕಿನ್  ಗಳನ್ನು ಮಷಿನ್ ಮೂಲಕ  ಪಡೆದುಕೊಳ್ಳಬಹುದು.  ಇಂತಹ ಮಷಿನ್ ಒಂದನ್ನು ಇದೀಗ ಬೆಂಗಳೂರಿನಲ್ಲಿ ಅಳವಡಿಸಲಾಗಿದೆ. 

ಬೆಂಗಳೂರು :  ಸ್ವಚ್ಛತೆ ಹಾಗೂ ಆರೋಗ್ಯದ ದೃಷ್ಟಿಯಿಂದ ‘ಸ್ಯಾನಿಟರಿ ನ್ಯಾಪ್‌ಕಿನ್ ವಿತರಣಾ ಯಂತ್ರ’ ಮತ್ತು ‘ಬಳಕೆ ಮಾಡಿದ ನ್ಯಾಪ್‌ಕಿನ್‌ಗಳನ್ನು ದಹಿಸಿ ನಾಶಪಡಿಸುವ ಯಂತ್ರ’ವನ್ನು ಇದೇ ಮೊದಲ ಬಾರಿಗೆ ಬೆಂಗಳೂರು ನೀರು ಸರಬರಾಜು ಮತ್ತು ಚರಂಡಿ ಮಂಡಳಿಯಲ್ಲಿ ಅಳವಡಿಸಲಾಗಿದೆ. 

ಈ ಯಂತ್ರವನ್ನು ಮಂಡಳಿಯ ಕಟ್ಟಡದಲ್ಲಿ ‘ಸನ್ ಗ್ರೀನ್ ಆರ್ಗ್ಯಾನಿಕ್’ ತ್ಯಾಜ್ಯ ವಿಲೇವಾರಿ ನಿರ್ವಹಣಾ ಸ್ವಯಂಸೇವಾ ಸಂಸ್ಥೆ ಅಳವಡಿಸಿದೆ. ಇದರಲ್ಲಿ ‘ಸ್ಯಾನಿಟರಿ ನ್ಯಾಪ್‌ಕಿನ್ ವೆಂಡಿಂಗ್ ಮೆಷಿನ್’ ಹಾಗೂ ‘ಸ್ಯಾನಿಟರಿ ನ್ಯಾಪ್‌ಕಿನ್ ಇನ್ ಸಿನರೇಟರ್’ ಎರಡು ಯಂತ್ರಗಳನ್ನು 38 ಸಾವಿರ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಈ ವೆಂಡಿಂಗ್ ಮೆಷಿನ್ ನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಬಳಸಬಹುದಾಗಿದೆ. ಸ್ವಚ್ಛತೆ ಹಾಗೂ ಶುಚಿತ್ವ ಇರುವೆಡೆ ಉತ್ತಮ ಆರೋಗ್ಯ ಇರುತ್ತದೆ. ಆರೋಗ್ಯ ಉತ್ತಮವಾಗಿದ್ದರೆ, ಕಾರ್ಯಕ್ಷಮತೆಯೂ ಹೆಚ್ಚುತ್ತದೆ. 

ಮಹಿಳಾ ಸಿಬ್ಬಂದಿಯ ಅಗತ್ಯತೆಗಳನ್ನು ಒದಗಿಸುವುದು ನಮ್ಮ ಬಹುಮುಖ್ಯ ಜವಾಬ್ದಾರಿ. ಬಳಸಿದ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಸುಟ್ಟು ನಾಶಪಡಿಸುವ ಯಂತ್ರ ಉಪಯೋಗಿಸುವ ಕುರಿತು ಅಲ್ಲಿನ ಸ್ವಚ್ಛತಾ ಸಿಬ್ಬಂದಿಗೆ ಪ್ರಾತ್ಯಕ್ಷಿಕೆ ನೀಡಲಾಗಿದೆ. ಯಂತ್ರದ ಬಳಕೆ ಅತಿ ಸುಲಭ ಎಂದು ಮಂಡಳಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಸಿಬ್ಬಂದಿ ಬಳಸಿ ಎಸೆದ ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಂದ ಚರಂಡಿ, ಶೌಚಾಲಯ ಕಟ್ಟಿಕೊಂಡು ಹಿಂಸೆ ಪಡುವಂತಾಗಿತ್ತು. ಇದೀಗ ಈ ನೂತನ ಯಂತ್ರಗಳ ಅಳವಡಿಕೆಯಿಂದ ಸ್ವಚ್ಛತಾ ಸಿಬ್ಬಂದಿಗೆ ನೆಮ್ಮದಿ ದೊರಕಿದೆ. ಮಹಿಳಾ ಸಿಬ್ಬಂದಿಗೂ ತೃಪ್ತಿಯಾಗಿದೆ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು. 

ಉಪಯೋಗ ಹೇಗೆ?: ಈ ಯಂತ್ರ ವಿವಿಧ ಮಾದರಿಗಳಲ್ಲಿ ಲಭ್ಯವಿದ್ದು, 5 ಪ್ಯಾಕ್‌ನಿಂದ ಒಂದು ಕೆ.ಜಿ.ವರೆಗೂ ನ್ಯಾಪ್‌ಕಿನ್‌ಗಳನ್ನು ವಿಲೇವಾರಿ ಮಾಡಲು ಸಹಕಾರಿಯಾಗಿದೆ. ಸದ್ಯ ಬಿಡಬ್ಲ್ಯೂ ಎಸ್‌ಎಸ್‌ಬಿಯಲ್ಲಿ 20 ಸ್ಯಾನಿಟರಿ ಪ್ಯಾಡ್ ವಿಲೇವಾರಿ ಮಾಡುವ ಯಂತ್ರ ಅಳವಡಿಸಲಾಗಿದೆ. ಈ ಯಂತ್ರವನ್ನು ನೆಲದ ಮೇಲೆ, ತೆರೆದ ಪ್ರದೇಶದಲ್ಲಿ, ಟೆರೇಸ್‌ನಲ್ಲಿ ಅಥವಾ ಗೋಡೆಯ ಮೇಲೆ ಹಾಗೂ ಶೌಚಾಲಯದಲ್ಲಿ ಅಳವಡಿಸಬಹುದು. ಇದರ ಗಾತ್ರ ಚಿಕ್ಕದಾಗಿದ್ದು, ಹೆಚ್ಚಿನ ಸ್ಥಳಾವಕಾಶ ಬೇಡುವುದಿಲ್ಲ. 

ಇದರಲ್ಲಿ ಕೆಂಪು ಹಾಗೂ ಹಸಿರು ಬಣ್ಣದ ಎರಡು ಬಟನ್‌ಗಳಿದ್ದು, ಬಳಸಿದ ನ್ಯಾಪ್ ಕಿನ್ ಒಳ ಹಾಕಿದ 10 - 15  ನಿಮಿಷದಲ್ಲಿ ಸಂಪೂರ್ಣವಾಗಿ ಸುಡಬಹುದು. ಅಲ್ಲದೆ ಕೊನೆಗೆ ಉಳಿಯುವ ಬೂದಿ ವಿಲೇವಾರಿ ಮಾಡುವವರಿಗೆ ಯಾವುದೇ ರೀತಿಯ ಅನಾರೋಗ್ಯವೂ ಉಂಟಾಗುವುದಿಲ್ಲ. ಇದರಿಂದ ಪರಿಸರದಲ್ಲಿ ಬ್ಯಾಕ್ಟೀರಿಯಾ ಹರಡುವುದನ್ನು ತಪ್ಪಿಸಬಹುದು. 

ಅಲ್ಲದೆ ಪ್ಲಾಸ್ಟಿಕ್ ಚೀಲ ಬಳಕೆಗೂ ಕಡಿವಾಣ ಬೀಳುವುದರೊಂದಿಗೆ ಜಲಮಾಲಿನ್ಯವನ್ನೂ ತಪ್ಪಿಸಬಹುದಾಗಿದೆ. ಶಾಲಾ- ಕಾಲೇಜುಗಳು, ಕಾರ್ಖಾನೆಗಳು, ಕಾರ್ಪೊರೇಟ್ ಸಂಸ್ಥೆಗಳು ಸೇರಿದಂತೆ ಪ್ರತಿ ಸಂಸ್ಥೆಗಳು  ಅಳವಡಿಸಿಕೊಳ್ಳಬಹುದು ಎನ್ನುತ್ತಾರೆ ಸನ್‌ಗ್ರೀನ್ ನ ಸಂಸ್ಥಾಪಕಿ ಬಿ.ಆರ್.ಶ್ರೀದೇವಿ ಹೇಳಿದರು. 


ಕಾವೇರಿ ಎಸ್ ಎಸ್
 

loader