ಈ ಬಾರಿಯ SSLC/PUC ಫಲಿತಾಂಶಗಳು ಶೀಘ್ರದಲ್ಲೇ ಹೊರಬೀಳಲಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಕೆಲವು ಪ್ರಮುಖ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.  ಪೋಷಕರಿಗೆ ತಮ್ಮ ಮಕ್ಕಳಿಂದ ಬಹಳಷ್ಟು ನಿರೀಕ್ಷೆಗಳಿರುವುದು ಸಹಜ. ಆದರೆ ಆ ನಿರೀಕ್ಷೆಗಳು ಮಕ್ಕಳ ಜೀವನದ ಮೇಲೆ ದುಷ್ಪರಿಣಾಮ ಬೀರುವ ಒತ್ತಡವಾಗಬಾರದಷ್ಟೆ.

  • ಅಂಕಗಳೇ ಜೀವನವಲ್ಲ, ಅಂಕಗಳು ಯಶಸ್ಸಿನ ಮಾನದಂಡವೂ ಅಲ್ಲ. ಅಂಕಗಳಿಗೂ ಬುದ್ಧವಂತಿಕೆಗೂ ಯಾವುದೇ ಸಂಬಂಧವಿಲ್ಲ.

  • ಎಲ್ಲಾ ಮಕ್ಕಳು ಒಂದೇ ರೀತಿಯಾಗಿರಲು ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆಗಳಿರುತ್ತವೆ, ಆದರೆ ಅದು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ.

  • ಆಸಕ್ತಿ ಬೇರೆ ಬೇರೆಯಾಗಿರುತ್ತದೆ, ವಿಷಯಗಳನ್ನು ಗ್ರಹಿಸುವ ರೀತಿ, ಕೆಲಸ ಮಾಡುವ ಸಾಮರ್ಥ್ಯ ವಿಭಿನ್ನವಾಗಿರುತ್ತದೆ.

  • ಮಕ್ಕಳನ್ನು ಒಂದೇ ಮಾನದಂಡವಿಟ್ಟು ನೋಡುವುದು ಸರಿಯಾದ ಕ್ರಮವಲ್ಲ. ಮಕ್ಕಳನ್ನು ಇತರ ಮಕ್ಕಳಿಗೆ ಹೋಲಿಸಬೇಡಿ. ನಿಮ್ಮ ಮಗು ಅಂಕ ಕಡಿಮೆ ಪಡೆದಿರಬಹುದು, ಆದರೆ ಇತರ ಮಕ್ಕಳಿಗಿಂತ ಹೆಚ್ಚು ಬುದ್ಧಿವಂತ ಹಾಗೂ ವಿವೇಕವಂತನಾಗಿರಬಹುದು.

  • ಯಾವ ರೀತಿ ಪೋಷಕರು ತಮ್ಮನ್ನು ಇತರ ಪೋಷಕರೊಂದಿಗೆ ಹೋಲಿಸಿಕೊಳ್ಳಲು ಸಾಧ್ಯವಿಲ್ಲವೋ ಹಾಗೇನೆ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸಲು ಸಾಧ್ಯವಿಲ್ಲ.

  • ಮಗುವಿನ ವ್ಯಕ್ತಿತ್ವ ಹಾಗೂ ಆತ/ಆಕೆಯ ಅಭಿರುಚಿಯಾಧರದಲ್ಲಿ ಮಾಡುವ ಸಾಧನೆಯೇ ಮುಖ್ಯ. ಅದುವೇ ಆತ/ಆಕೆಗೆ ಆತ್ಮಸಂತೃಪ್ತಿ ತರಬಲ್ಲುದು, ಹಾಗೂ ಸಮಾಜಕ್ಕೂ ಅದು ಒಳ್ಳೆಯದು.

  • ಸಾಧನೆಗೆ ಅಂಕಗಳ ಹಂಗಿಲ್ಲ, ಹಾಗೂ ಯಶಸ್ಸಿಗೆ ಅಂಕಗಳು ಅನಿವಾರ್ಯವೂ ಅಲ್ಲ.

  • ಪರೀಕ್ಷೆ ಪಾಸಾಗುವುದು ಅಥವಾ ಹೆಚ್ಚೆಚ್ಚು ಅಂಕಗಳನ್ನು ಗಳಿಸುವುದೇ ಜೀವನವಲ್ಲ. ಜೀವನ ಬಹಳ ವಿಶಾಲವಾದುದು. ಪರೀಕ್ಷೆ ಹಾಗೂ ಅವುಗಳ ಫಲಿತಾಂಶಗಳು ಜೀವನದ ಒಂದು ಅತೀ ಸಣ್ಣ ಭಾಗ.

ಆದುದರಿಂದ,

  • ವಿದ್ಯಾರ್ಥಿಗಳಾಗಲಿ ಅಥವಾ ಪೋಷಕರಾಗಲಿ ಬಯಸಿದ ಅಥವಾ ವ್ಯತಿರಿಕ್ತ ಫಲಿತಾಂಶ ಬಂದಲ್ಲಿ ಆತಂಕ್ಕೊಳಗಾಗಬಾರದು, ಸಿಟ್ಟಾಗಬಾರದು. ಅಥವಾ ಯಾವುದೇ ಕೆಟ್ಟ ನಿರ್ಧಾರಕ್ಕೂ ಮುಂದಾಗಬಾರದು. ಫಲಿತಾಂಶವನ್ನು ಸವಾಲಾಗಿ ಸ್ವೀಕರಿಸಬೇಕು.

  • ಪೋಷಕರು ಮಕ್ಕಳ ಜತೆ ಫಲಿತಾಂಶ ವೀಕ್ಷಿಸಲು ಹೋಗುವುದು ಒಳಿತು. ಕಡಿಮೆ ಅಂಕ ಬಂದರೆ ಅಥವಾ ಅನುತ್ತೀರ್ಣರಾದರೆ, ಮಕ್ಕಳನ್ನು ನಿಂದಿಸದೇ ಧೈರ್ಯತುಂಬುವ ಕೆಲಸವನ್ನು ಪೋಷಕರು ಮಾಡಬೇಕು. ಆ ಸಂದರ್ಭದಲ್ಲಿ ಅವರಿಗೆ ಅತೀ ಅಗತ್ಯವಿರುವುದು ಧೈರ್ಯ ಹಾಗೂ ಆತ್ಮವಿಶ್ವಾಸ. ಪೋಷಕರೇ ಹಾಗೂ ಆತ್ಮಿಯರೇ ಅದನ್ನು ತುಂಬದಿದ್ದರೆ ಬೇರಾರು ಆ ಕೆಲಸ ಮಾಡುತ್ತಾರೆ?

  • ಪರಿಸ್ಥಿತಿ ಏನೇ ಇರಲಿ ಪೋಷಕರು/ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಪರ್ಯಾಯ ಯೋಜನೆಯನ್ನು (Plan B) ಮಾಡಿಕೊಳ್ಳಬೇಕು. ಸಮಯಾವಕಾಶ ಎಲ್ಲರ ಬಳಿ ಇದ್ದೇ ಇರುವುದು. ಯಾವುದೇ ಫಲಿತಾಂಶ ಅಂತಿಮವಲ್ಲ. ಮರಳಿ ಪ್ರಯತ್ನ ಮಾಡುವ ಅವಕಾಶ ಎಲ್ಲರಿಗೂ ಇದೆಯೆಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಿ.

  • ಓದಲು, ಸಾಧಿಸಲು ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಬಿಟ್ಟು ಸಾವಿರಾರು ಕ್ಷೇತ್ರಗಳಿವೆ. ಅವುಗಳಲ್ಲಿ ತಮಗೆ ಆಸಕ್ತಿ, ಸಾಮರ್ಥ್ಯವಿರುವ ಕ್ಷೇತ್ರವನ್ನು ವಿದ್ಯಾರ್ಥಿಗಳೇ ಆಯ್ಕೆ ಮಾಡಿಕೊಳ್ಳಲಿ.

  • ಪೋಷಕರು ಶೋಷಕರಾಗಬಾರದು. ಪೋಷಕರು ತಮ್ಮ ಮಕ್ಕಳು ಮುಂದಿನ ಸುಲಭವಾಗಿ ಆಯ್ಕೆ ಮಾಡಿಕೊಳ್ಳಲು ಬೇಕಾದ ಬೆಂಬಲ, ಸಲಹೆ, ಮಾರ್ಗದರ್ಶನವೊದಗಿಸುವ ಕೆಲಸ ಮಾಡಬೇಕೇ ಹೊರತು ತಮ್ಮ ನಿರೀಕ್ಷೆ/ಗುರಿಗಳನ್ನು ಅವರ ಮೇಲೆ ಹೇರುವ ಕೆಲಸ ಮಾಡಬಾರದು. ನೆನಪಿರಲಿ ಮಕ್ಕಳಿಗೆ ಅವರದ್ದೇ ಆದ ವ್ಯಕ್ತಿತ್ವಯಿದೆ, ಜೀವನವಿದೆ, ಗುರಿಯಿದೆ.

  • ಎಲ್ಲರಿಗೂ All The Best