ಪಂಜಾಬ್- ಹ‌ರ್ಯಾಣ (ಸತ್ಲೇಜ್-ಯಮುನಾ)

ಪಂಜಾಬ್‌ನಿಂದ ಹ‌ರ್ಯಾಣ ಪ್ರತ್ಯೇಕ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದಾಗ ಆದ 1966ರ ಒಪ್ಪಂದದಂತೆ ಪಂಜಾಬ್ ಹ‌ರ್ಯಾಣಕ್ಕೆ ಸತ್ಲೇಜ್ ನೀರು ನೀಡಬೇಕು. ಈ ಸಂಬಂಧ ಸಂಪರ್ಕ ನಾಲೆ ಕಾಮಗಾರಿಯನ್ನು ರಾಜಕೀಯ ಕಾರಣಕ್ಕಾಗಿ 1990ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಈ ಸಂಬಂಧದ ಸುಪ್ರೀಂ ಕೋರ್ಟ್ ಆದೇಶವನ್ನು ಕೂಡ ಪಂಜಾಬ್ ಪಾಲಿಸುತ್ತಿಲ್ಲ.

***

ಒಡಿಶಾ-ಛತ್ತೀಸಗಡ (ಮಹಾನದಿ)

ಮಹಾನದಿಗೆ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಛತ್ತೀಸಗಡ ಸರ್ಕಾರ ಹಿರಾಕುಡ್ ಜಲಾಶಯದ ನೀರನ್ನು ಕದಿಯುತ್ತಿದೆ ಎಂಬುದು ಒಡಿಶಾ ಆರೋಪ. ನಾಲ್ಕು ದಶಕಗಳ ಈ ಜಲ ವಿವಾದ, ಸದ್ಯ ಒಡಿಶಾದ ನವೀನ್ ಪಟ್ನಾಯಕ್ ಅವರ ಸರ್ಕಾರ ಮತ್ತು ಛತ್ತೀಸಗಡದ ಬಿಜೆಪಿ ಸರ್ಕಾರದ ನಡುವೆ ರಾಜಕೀಯ ಮತ್ತು ಕಾನೂನು ಸಮರಕ್ಕೆ ಕಾರಣವಾಗಿದೆ.

***

ತೆಲಂಗಾಣ-ನೆರೆ ರಾಜ್ಯಗಳು (ಕೃಷ್ಣಾ)

ಆಂಧ್ರ, ಕರ್ನಾಟಕ, ಮಹಾರಾಷ್ಟ್ರ ಮತ್ತು ತನ್ನ ನಡುವೆ ಕೃಷ್ಣಾ ನದಿ ನೀರು ಹಂಚಿಕೆ ವಿಷಯ ಇತ್ಯರ್ಥ ಮಾಡುವಂತೆ ತೆಲಂಗಾಣವು ಕೇಂದ್ರ ಜಲ ನ್ಯಾಯಮಂಡಳಿಗೆ ಮನವಿ ಮಾಡಿದೆ. ಇದಕ್ಕೆ ಕರ್ನಾಟಕ, ಮಹಾರಾಷ್ಟ್ರ ವಿರೋಧಿಸಿವೆ. ಆದರೆ ಆಂಧ್ರಪ್ರದೇಶ ಪುನರ್‌ವಿಂಗಡಣೆ ಕಾಯ್ದೆ ಪ್ರಕಾರ, ಕೃಷ್ಣಾ ನೀರನ್ನು ಆಂಧ್ರದ ಪಾಲಿನಲ್ಲೇ ತೆಲಂಗಾಣವೂ ಹಂಚಿಕೊಳ್ಳಬೇಕಿದೆ.

***

ತಮಿಳುನಾಡು-ಕೇರಳ (ಸಿರುವಾಣಿ)

ಅಟ್ಟಪಾಡಿ ಬಳಿ ಸಿರುವಾಣಿ ನದಿಗೆ ಕೇರಳ ನಿರ್ಮಿಸಲು ಮುಂದಾಗಿರುವ ಅಣೆಕಟ್ಟನ್ನು ತಮಿಳುನಾಡು ವಿರೋಧಿಸಿದೆ. ಇದರಿಂದ ಕೊಯಮತ್ತೂರು ನಗರಕ್ಕೆ ಕುಡಿಯುವ ನೀರಿನ ಕೊರತೆಯಾಗಲಿದೆ, ಮೂರು ಜಿಲ್ಲೆಗಳ ನೀರಾವರಿಗೆ ಧಕ್ಕೆಯಾಗಲಿದೆ ಎಂಬುದು ತಮಿಳುನಾಡು ವಾದ. ಆದರೆ ಒಪ್ಪಂದದಂತೆ ಕೇರಳ ತನ್ನ ಪಾಲಿನ ಆರು ಟಿಎಂಸಿ ನೀರು ಬಳಸಿಕೊಳ್ಳಬಹುದು.

***

ಒಡಿಶಾ-ಛತ್ತೀಸಗಡ-ಆಂಧ್ರ (ಗೋದಾವರಿ)

ಆಂಧ್ರದಲ್ಲಿ ಗೋದಾವರಿ ನದಿಗೆ ನಿರ್ಮಿಸಲಾಗುತ್ತಿರುವ ಪೊಲವರಂ ವಿವಿಧೋದ್ದೇಶ ಜಲಾಶಯಕ್ಕೆ ಒಡಿಶಾ, ಛತ್ತೀಸಗಡ ವಿರೋಧಿಸಿವೆ. ಜಲಾಶಯ ನಿರ್ಮಾಣದಿಂದಾಗಿ ಎರಡೂ ರಾಜ್ಯಗಳ ಸುಮಾರು 10 ಸಾವಿರ ಹಳ್ಳಿ ಮುಳುಗಡೆಯಾಗುತ್ತವೆ ಎಂಬುದು ಅವುಗಳ ವಾದ. ಆದರೆ ಆಂಧ್ರ ಸರ್ಕಾರ ಈ ವಾದವನ್ನು ತಳ್ಳಿಹಾಕಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿದೆ.

*****

ಕಾವೇರಿ ಕಣಿವೆಯಲ್ಲಿ ಸರಾಸರಿ ಮಳೆ ಪ್ರಮಾಣ

ಶೇ.29-59ರಷ್ಟು ಮಳೆ ಕೊರತೆ

ನೈರುತ್ಯ ಮುಂಗಾರು ಅವಧಿ ಮುಕ್ತಾಯಕ್ಕೆ ಇನ್ನು 9 ದಿನ ಬಾಕಿ ಇರುವಾಗ, ಜೂ.1ರಿಂದ ಸೆ.21ರವರೆಗೆ ಕಾವೇರಿ ಕಣಿವೆ ಪ್ರದೇಶದ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ವ್ಯಾಪ್ತಿಯಲ್ಲಿ ವಾಡಿಕೆಗಿಂತ ಶೇ.29ರಿಂದ ಶೇ.59ರಷ್ಟು ಮಳೆ ಕೊರತೆ ಉಂಟಾಗಿದೆ.

ನೈರುತ್ಯ ಮುಂಗಾರು ವಾಡಿಕೆ

ಜೂ.1ರಿಂದ ಸೆ.30ರವರೆಗಿನ ನಾಲ್ಕು ತಿಂಗಳ ನೈರುತ್ಯ ಮುಂಗಾರು ಅವಧಿಯಲ್ಲಿ, ಕಾವೇರಿ ಮೂಲ ಕೊಡಗು ಜಿಲ್ಲೆ ಹೊರತುಪಡಿಸಿ ಅದರ ಹರಿವಿನ ಕಣಿವೆಯಲ್ಲಿ ವಾಡಿಕೆಯಾಗಿ 25 ಸೆಂ.ಮೀ.ನಿಂದ 75 ಸೆಂ.ಮೀ ಮಳೆಯಾಗುತ್ತದೆ.

ಈಶಾನ್ಯ ಮುಂಗಾರು

ಅಕ್ಬೋಬರ್‌ನಿಂದ ಡಿಸೆಂಬರ್‌ವರೆಗಿನ ಈಶಾನ್ಯ ಮುಂಗಾರು ಅವಧಿಯಲ್ಲಿ ತಮಿಳುನಾಡು ಕರಾವಳಿ ಪ್ರದೇಶ ವಾಡಿಕೆಯಾಗಿ 70 ಸೆಂಮೀ ಮಳೆ ಪಡೆಯುತ್ತದೆ. ಈ ಅವಧಿಯಲ್ಲಿ ಕಾವೇರಿ ಕಣಿವೆ ಸೇರಿದಂತೆ ದ.ಕರ್ನಾಟಕ ಕೇವಲ 10ರಿಂದ 30 ಸೆಂಮೀ ಮಳೆ ಮಾತ್ರ ಪಡೆಯುತ್ತದೆ.