ಭಾರತೀಯ ಪ್ರವಾಸಿಗರು ಈ ಭೂಮಿಯಲ್ಲೇ ಅತಿ ಕೊಳಕರು ಎಂದು ಹೇಳಿಕೆ ನೀಡಿದ್ದ  ಗೋವಾದ ಪ್ರಭಾವಿ ಸಚಿವ ವಿಜಯ್‌ ಸರದೇಸಾಯಿ ತಾನು ಹೇಳಿಕೆಗೆ ಬದ್ಧನಾಗಿದ್ದು, ಕ್ಷಮೆ ಯಾಚಿಸುವುದಿಲ್ಲವೆಂದಿದ್ದಾರೆ.

ಪಣಜಿ: ಭಾರತೀಯ ಪ್ರವಾಸಿಗರು ಈ ಭೂಮಿಯಲ್ಲೇ ಅತಿ ಕೊಳಕರು ಎಂದು ಹೇಳಿಕೆ ನೀಡಿದ್ದ ಗೋವಾದ ಪ್ರಭಾವಿ ಸಚಿವ ವಿಜಯ್‌ ಸರದೇಸಾಯಿ ತಾನು ಹೇಳಿಕೆಗೆ ಬದ್ಧನಾಗಿದ್ದು, ಕ್ಷಮೆ ಯಾಚಿಸುವುದಿಲ್ಲವೆಂದಿದ್ದಾರೆ.

ನಾನು ಉತ್ತರ ಭಾರತೀಯರ ವಿರೋಧಿಯಲ್ಲ. ಗೋವಾಕ್ಕೆ ಭೇಟಿ ನೀಡುವ 6.5 ಮಿಲಿಯನ್ ಪ್ರವಾಸಿಗರಲ್ಲಿ ಒಂದು ಸಣ್ಣ ವರ್ಗಕ್ಕೆ ಸಾಮಾನ್ಯ ನಾಗರಿಕ ಪ್ರಜ್ಞೆಯೂ ಇರಲ್ಲ, ಸಾರ್ವಜನಿಕವಾಗಿ ಹೇಸಿಗೆ ಹುಟ್ಟಿಸುತ್ತಾರೆ, ಎಂದು ಅವರು ಹೇಳಿದ್ದಾರೆ.

 ಗೋವಾಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು ಈ ಭೂಮಿಯಲ್ಲೇ ಅತಿ ಕೊಳಕರು. ಇದಲ್ಲದೆ, ಉತ್ತರ ಭಾರತದ ಪ್ರವಾಸಿಗರು ಗೋವಾವನ್ನು ಇನ್ನೊಂದು ‘ಹರ್ಯಾಣ’ ಮಾಡಲು ಹೊರಟಿದ್ದಾರೆ ಎಂದು ಸರದೇಸಾಯಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

 ಮನೋಹರ್‌ ಪರ್ರಿಕರ್‌ ನೇತೃತ್ವದ ಬಿಜೆಪಿ ಸರ್ಕಾರದ ಆಧಾರ ಸ್ತಂಭ ಎನ್ನಿಸಿಕೊಂಡಿರುವ ಗೋವಾ ಫಾರ್ವರ್ಡ್‌ ಪಾರ್ಟಿ ಮುಖಂಡರೂ ಆದ ಸರದೇಸಾಯಿ ಸಮಾರಂಭವೊಂದರಲ್ಲಿ ಮಾತನಾಡಿ, ‘ಗೋವಾ ಜನರು ಅತ್ಯಂತ ಶ್ರೇಷ್ಠರು. ಆದರೆ ಇದಕ್ಕೆ ತದ್ವಿರುದ್ಧವಾಗಿ ಭಾರತದ ಇತರ ರಾಜ್ಯಗಳ ಪ್ರವಾಸಿಗರು ಕೊಳಕರು. ನಿಮ್ಮ ಮುಖ್ಯಮಂತ್ರಿ (ಪರ್ರಿಕರ್‌) ಪ್ರವಾಸಿಗರು ಹೆಚ್ಚು ಬರಲಿ ಎಂದು ಹೇಳುತ್ತಿದ್ದಾರೆ. ಆದರೆ ನಮ್ಮಲ್ಲಿ ಬರುತ್ತಿರುವ ದೇಶಿ ಪ್ರವಾಸಿಗರು ಬೇಜವಾಬ್ದಾರಿ ವ್ಯಕ್ತಿಗಳು’ ಎಂದು ಆರೋಪಿಸಿದ್ದರು.