ಸಿದ್ದಯ್ಯ ಹಿರೇಮಠ

ಕಾಗವಾಡ[ಆ.17]: ಮಹಾರಾಷ್ಟ್ರ​ ಸರ್ಕಾರ ಸ್ವಲ್ಪ ಎಚ್ಚೆತ್ತುಕೊಂಡಿದ್ದರೂ ಕರ್ನಾಟಕದ ಕೃಷ್ಣಾ ನದಿ ಪಾತ್ರದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ತಗ್ಗಿಸಬಹುದಿತ್ತು. ಈ ವಿಚಾರದಲ್ಲಿ ಕರ್ನಾಟಕ ಸರ್ಕಾರ ಸಹ ಎಡವಿದೆ ಎನ್ನಲಾಗುತ್ತಿದೆ.

ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಕೃಷ್ಣಾ ನದಿ ಉಗಮಗೊಳ್ಳಲಿದೆ. ಮಹಾ ಸರ್ಕಾರ ಕೃಷ್ಣಾ ನದಿಗೆ ಕೊಯ್ನಾ (101.69 ಟಿಎಂಸಿ), ವಾರನಾ (32.52 ಟಿಎಂಸಿ) ಸೇರಿದಂತೆ 202.84 ಟಿಎಂಸಿ ಸಂಗ್ರಹ ಸಾಮರ್ಥ್ಯದ ಒಟ್ಟು 8 ಜಲಾಶಯಗಳ ಜತೆಗೆ ಹಲವು ಬ್ಯಾರೇಜ್‌ಗಳನ್ನು ನಿರ್ಮಿಸಿದೆ.

ಮಹಾ ಎಡವಟ್ಟು?:

ಆಗಸ್ಟ್‌ ಆರಂಭದಿಂದಲೇ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಅತಿವೃಷ್ಟಿಯಾಗುತ್ತಿರುವುದು ಗೊತ್ತಿದ್ದರೂ ಜಲಾಶಯಗಳ ಜತೆಗೆ ಬ್ಯಾರೇಜ್‌ಗಳಲ್ಲಿ ನೀರು ಸಂಗ್ರಹಕ್ಕೆ ಮುಂದಾಗಿತ್ತು. ಮುಂದಿನ ದಿನಗಳಲ್ಲೂ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದರೂ ಜಲಾಶಯಗಳ ಒಳಹರಿವು ಹೆಚ್ಚಿಸುವ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ. ನೀರು ಬಿಡುವ ಕುರಿತು ಕರ್ನಾಟಕದೊಂದಿಗೂ ಯಾವುದೇ ಚರ್ಚೆ ನಡೆಸಿರಲಿಲ್ಲ. ಆದರೆ, ಆ.3ರಂದು ಕೊಯ್ನಾ ಜಲಾಶಯದಿಂದ 20 ಕಿ.ಮೀ. ದೂರದಲ್ಲಿ ಭೂಕಂಪ ಸಂಭವಿಸಿತು. ಜತೆಗೆ ಧಾರಾಕಾರ ಮಳೆ ಮುಂದುವರೆದ ಕಾರಣ ಏಕಾಏಕಿ 2 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರನ್ನು ನದಿ ಬಿಡಲು ಆರಂಭಿಸಿತು. ಈ ವೇಳೆಗಾಗಲೇ ರಾಜ್ಯದ ಆಲಮಟ್ಟಿಹಾಗೂ ನಾರಾಯಣಪುರ ಜಲಾಶಯಗಳು ಬಹುತೇಕ ಭರ್ತಿ ಹಂತ ತಲುಪಿದ್ದವು. ಪರಿಸ್ಥಿತಿ ಹೀಗಿರುವಾಗ ಮಹಾರಾಷ್ಟ್ರದಿಂದ ಹರಿದು ಬರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿತು.

ಜತೆಗೆ ಕೃಷ್ಣಾ ತೀರ ಪ್ರದೇಶದ ಬೆಳಗಾವಿ, ಬಾಗಲಕೋಟೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯಲು ಆರಂಭಿಸಿತು. ಹೀಗಾಗಿ ಮಹಾರಾಷ್ಟ್ರದಿಂದ ಬರುವ ನೀರಿನ ಪ್ರಮಾಣ, ನಮ್ಮಲ್ಲಿ ಸುರಿದ ಮಳೆ ನೀರು ಒಟ್ಟಿಗೆ ಸೇರಿ ಹರಿದ ಪರಿಣಾಮ ಕೃಷ್ಣಾ ನದಿಗೆ ಬರುವ ನೀರಿನ ಪ್ರಮಾಣ ಏರಿಕೆಯಾಗಿ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ತಲೆದೋರಿತು. ಹೀಗೆ ಮಹಾರಾಷ್ಟ್ರ ವಿವೇಚನೆ ಇಲ್ಲದೇ ಮಾಡಿದ ತಪ್ಪಿಗೆ ಬೆಳಗಾವಿ, ಬಾಗಲಕೋಟೆ, ಯಾದಗಿರಿ, ರಾಯಚೂರ ಜಿಲ್ಲೆ​ಯಲ್ಲಿ ಜಲಪ್ರವಾ​ಹ ಉಂಟಾಯಿತು ಎಂಬ ಆರೋಪ ಕೇಳಿಬಂದಿದೆ.

ರಾಜ್ಯ ಸರ್ಕಾರವೂ ಎಡವಿತಾ?:

ಪ್ರವಾಹ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸಿದರೂ, ಪ್ರವಾಹ ಬರುವ ಮುನ್ನ ಎಡವಿತು. ಮಹಾರಾಷ್ಟ್ರದ ಕೊಂಕಣ ತೀರ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ವಿಚಾರ ಗೊತ್ತಿದ್ದರೂ ಅಲ್ಲಿಗೆ ಒಬ್ಬ ಜಲಸಂಪನ್ಮೂಲ ಇಲಾಖೆ ಅಧಿಕಾರಿಯನ್ನು ಕಳುಹಿಸಿ ವಾಸ್ತವ ಚಿತ್ರಣ ಪಡೆದುಕೊಳ್ಳಬೇಕಿತ್ತು. ಆ ಕೆಲಸ ಮಾಡದೇ ರಾಜ್ಯ ಸರ್ಕಾರ ದೊಡ್ಡ ತಪ್ಪು ಮಾಡಿತು ಎನ್ನಲಾಗಿದೆ.