ನವದೆಹಲಿ[ಜೂ.24]: ಪಕ್ಷದ ಅಧ್ಯಕ್ಷ ಹುದ್ದೆಗೆ ಗಾಂಧೀ- ನೆಹರು ಕುಟುಂಬೇತರ ವ್ಯಕ್ತಿ ಆಯ್ಕೆಗೆ ಕಾಂಗ್ರೆಸ್‌ನೊಳಗೆ ವಿರೋಧ ವ್ಯಕ್ತವಾಗಿರುವಾಗಲೇ, ಗಾಂಧೀ- ನೆಹರು ಕುಟುಂಬದ ಸದಸ್ಯರು ಪಕ್ಷದ ಅಧ್ಯಕ್ಷರಾಗದೇ ಇದ್ದರೂ, ಪಕ್ಷ ಉಳಿಯಬಲ್ಲದು ಎಂದು ಪಕ್ಷದ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಹೇಳಿದ್ದಾರೆ.

ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆ ಹಿನ್ನೆಲೆಯಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನವೊಂದನ್ನು ನೀಡಿರುವ ಅಯ್ಯರ್‌ ‘ಗಾಂಧೀ- ನೆಹರು ಕುಟುಂಬೇತರರು ಪಕ್ಷದ ಅಧ್ಯಕ್ಷರಾಗಬಹುದು. ಆದರೆ ಗಾಂಧೀ ಕುಟುಂಬ ಸಂಘಟನೆಯೊಳಗೆ ಸಕ್ರಿಯರಾಗಿರಬೇಕು’ ಎಂದು ಹೇಳಿದ್ದಾರೆ.

‘ರಾಹುಲ್‌ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರೆದರೆ ಒಳ್ಳೆಯದು. ಆದರೆ ಕೆಲವೊಮ್ಮೆ ರಾಹುಲ್‌ ಅವರ ಅಭಿಪ್ರಾಯಗಳನ್ನೂ ನಾವು ಗೌರವಿಸಲೇಬೇಕು. ಪಕ್ಷದ ಅಧ್ಯಕ್ಷ ಹುದ್ದೆಯನ್ನು ಗಾಂಧೀ- ನೆಹರೂ ಕುಟುಂಬ ವಹಿಸಿಕೊಳ್ಳದೇ ಇದ್ದರೂ, ಪಕ್ಷದ ಉಳಿಯಬಲ್ಲದು. ಆದರೆ ಇದಕ್ಕಾಗಿ ಗಾಂಧೀ ಕುಟುಂಬ ಸಂಘಟನೆಯಲ್ಲಿ ಸಕ್ರಿಯರಾಗಿರಬೇಕು. ಸಂಘಟನೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಎದುರಾದಲ್ಲಿ ಅವರು ಪರಿಹಾರ ಸೂಚಿಸಬೇಕು ಎಂಬುದು ನನ್ನ ಅಭಿಪ್ರಾಯ. ಈ ಹಿಂದೆಯೂ ಗಾಂಧೀ- ನೆಹರೂ ಕುಟುಂಬದವರು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು, ಪಕ್ಷವನ್ನು ಮುನ್ನಡೆಸಿದ ಉದಾಹರಣೆ ನಮ್ಮ ಮುಂದಿದೆ ’ ಎಂದು ಅಯ್ಯರ್‌ ಹೇಳಿದ್ದಾರೆ.

ಹೊಸ ಅಧ್ಯಕ್ಷರ ಹುಡುಕಲು ರಾಹುಲ್‌ ಪಕ್ಷದ ನಾಯಕರಿಗೆ ಒಂದು ತಿಂಗಳ ಗಡುವು ನೀಡಿದ್ದಾರೆ. ಆದರೆ ಸ್ವತಃ ರಾಹುಲ್‌ ಅವರೇ ಹುದ್ದೆಯಲ್ಲಿ ಮುಂದುವರೆಬೇಕೆಂಬುದು ಪಕ್ಷದಲ್ಲಿನ ಬಹುತೇಕ ನಾಯಕರ ಒತ್ತಾಸೆ ಎಂದು ಹೇಳಿದ್ದಾರೆ.