ಇದೊಳ್ಳೆ ರಾಮಾಯಾಣ: ಕುಡಿತ ಬೇಡ ಅನ್ನೋರು ಬೇಗನೆ ಸಾಯ್ತಾರಂತೆ..!
ಆಲ್ಕೋಹಾಲ್ ಸೇವನೆ ಮಾಡದಿದ್ದರೆ ಸಾವು ಬೇಗ ಬರುತ್ತೆ
ನ್ಯೂಜಿಲ್ಯಾಂಡ್ ಕ್ವೀನ್ಸ್ ವಿವಿ ಸಂಶೋಧಕರ ಅಂಬೋಣ
ಆಲ್ಕೋಹಾಲ್ ಸೇವನೆ ಮಾಡುವವರ ಆಯುಷ್ಯ ಧೀರ್ಘವಂತೆ
ಅನಿಯಂತ್ರಿತ ಕುಡಿತಕ್ಕೆ ಎಚ್ಚರಿಕೆಯನ್ನೂ ನೀಡಿದ ಸಂಶೋಧನೆ
ಬೆಂಗಳೂರು(ಜೂ.22): ಇದು ಕುಡುಕರಿಗೆ ಒಳ್ಳೆ ಸುದ್ದಿಯೋ ಅಥವಾ ಕುಡಿತವನ್ನು ದ್ವೇಷಿಸುವವರಿಗೆ ಕೆಟ್ಟ ಸುದ್ದಿಯೋ ಗೊತ್ತಿಲ್ಲ. ಆದರೆ ಇಬ್ಬರೂ ಈ ಸುದ್ದಿಯನ್ನು ಓದಲೇಬೇಕಾದ ಜರೂರತ್ತು ಇದೆ. ನ್ಯೂಜಿಲ್ಯಾಂಡ್ ನ ಕ್ವೀನ್ಸ್ ಯುನಿವರ್ಸಿಟಿ ಸಂಶೋಧಕರು ಪ್ರಕಟಿಸಿದ ವರದಿಯೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ.
ಹೌದು, ನ್ಯೂಜಿಲ್ಯಾಂಡ್ ನ ಕ್ವೀನ್ಸ್ ಯುನಿವರ್ಸಿಟಿ ಸಂಶೋಧಕ ಪ್ರಕಾರ ಆಲ್ಕೋಹಾಲ್ ಸೇವನೆ ಮಾಡದವರಿಗೆ ಇದನ್ನು ಸೇವನೆ ಮಾಡುವವರಿಗಿಂತ ಬೇಗ ಸಾವು ಸಂಬವಿಸುತ್ತದಂತೆ. ವಾರಕ್ಕೆ ಎರಡು ಬಾಟಲ್ ಬೀರ್ ಅಥವಾ ಒಂದು ಗ್ಲಾಸ್ ವೈನ್ ಕುಡಿಯುವ ಹವ್ಯಾಸವುಳ್ಳವರು ಆರೋಗ್ಯವಂತರಾಗಿರುತ್ತಾರೆ ಎಂದು ಸಂಶೋಧನೆ ತಿಳಿಸಿದೆ.
ಅಮೆರಿಕದಲ್ಲಿ ನಿಧನರಾದ 55 ವರ್ಷಕ್ಕೆ ಮೇಲ್ಪಟ್ಟ ಸುಮಾರು ಒಂದು ಲಕ್ಷ ಜನರ ಕುರಿತು ಸಂಶೋಧನೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕ್ವೀನ್ಸ್ ಯುನಿವರ್ಸಿಟಿಯ ಸಂಶೋಧಕ ಡಾ. ಆಂಡ್ರೂ ಕುಂಜಮನ್, ಆಲ್ಕೋಹಾಲ್ ಸೇವನೆ ಮಾಡದವರಿಗೆ ಇದನ್ನು ಸೇವನೆ ಮಾಡುವವರಿಗಿಂತ ಬೇಗನೆ ಸಾವು ಸಂಭವಿಸುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಆಲ್ಕೋಹಾಲ್ ಸೇವನೆ ಮಾಡದವರಲ್ಲಿ ಕ್ಯಾನ್ಸರ್ ರೋಗ ಹೆಚ್ಚು ಕಂಡುಬಂದಿದೆ ಎಂದು ಕುಂಜಮನ್ ತಿಳಿಸಿದ್ದಾರೆ.
ಆದರೆ ಈ ಕುರಿತು ಮತ್ತಷ್ಟು ಸಂಶೋಧನೆ ನಡೆಸುವ ಅವಶ್ಯಕತೆ ಇದೆ ಎಂದೂ ಡಾ. ಕುಂಜಮನ್ ತಿಳಿಸಿದ್ದಾರೆ. ಈ ಸಂಶೋಧನೆ ಅನಿಯಂತ್ರಿತ ಆಲ್ಕೋಹಾಲ್ ಸೇವನೆಯನ್ನು ಖಂಡಿತ ಬೆಂಬಲಿಸುವುದಿಲ್ಲ ಎಂದಿರುವ ಅವರು, ನಿಯಂತ್ರಿತ ಆಲ್ಕೋಹಾಲ್ ಸೇವನೆಯಿಂದಾಗಬಹುದಾದ ಸಕಾರಾತ್ಮಕ ಅಂಶಗಳನ್ನು ಮಾತ್ರ ಸಂಶೋಧನೆಯಲ್ಲಿ ಗಣನೆಗೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ- ಮದಿರೆ ಎಂಬ ಮತ್ತಿನ ಕುದುರೆ ಏರಿ: ಜಾನಿ ವಾಕರ್ ಯಶೋಗಾಥೆ..!