ಮುಂದಿನ ಒಂದು ವರ್ಷ ಕಾಲವಂತೂ ಸರ್ಕಾರ ಗಟ್ಟಿಯಾಗಿರುತ್ತದೆ. ನನ್ನನ್ನು ಯಾರೂ ಟಚ್‌ ಮಾಡಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆವರೆಗೂ ಸರ್ಕಾರ ಸುಭದ್ರವಾಗಿರುತ್ತದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು : ಮುಂದಿನ ಒಂದು ವರ್ಷ ಕಾಲವಂತೂ ಸರ್ಕಾರ ಗಟ್ಟಿಯಾಗಿರುತ್ತದೆ. ನನ್ನನ್ನು ಯಾರೂ ಟಚ್‌ ಮಾಡಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆವರೆಗೂ ಸರ್ಕಾರ ಸುಭದ್ರವಾಗಿರುತ್ತದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಐದು ವರ್ಷಗಳ ಕಾಲ ಸರ್ಕಾರ ಸುಭದ್ರವಾಗಿರಲಿದೆ ಎಂಬ ಹೇಳಿಕೆ ನೀಡುತ್ತಿದ್ದ ಕುಮಾರಸ್ವಾಮಿ ಅವರು ಇದೀಗ ಏಕಾಏಕಿ ತಮ್ಮ ಮಾತಿನ ಧಾಟಿ ಬದಲಿಸಿರುವುದು ಸಾಕಷ್ಟುಕುತೂಹಲ ಮೂಡಿಸಿದ್ದು, ಸಮನ್ವಯ ಸಮಿತಿ ಸಭೆ ನಡೆದ ಮರುದಿನವೇ ಈ ರೀತಿ ಹೇಳಿರುವುದು ಹಲವು ಅನುಮಾನಗಳಿಗೂ ಎಡೆ ಮಾಡಿಕೊಟ್ಟಂತಾಗಿದೆ.

ಶುಕ್ರವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಆಯೋಜಿಸಿದ್ದ ರಾಜ್ಯ ಶಾಖೆಯ 15ನೇ ರಾಜ್ಯಮಟ್ಟದ ಲೆಕ್ಕ ಪರಿಶೋಧಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಉತ್ತಮ ಮಳೆ ಸುರಿಸುವ ಮೂಲಕ ಪ್ರಕೃತಿ ಕೂಡ ನನ್ನ ಪರವಾಗಿಯೇ ಇದೆ. ಹಣ ಪಡೆಯುವ ಅಧಿಕಾರಿಗಳನ್ನು ಬಿಗಿಗೊಳಿಸಿ ಸರ್ಕಾರ ನಡೆಸಲಾಗುವುದು. ಆದರೆ, ಕೆಲವು ಮಾಧ್ಯಮಗಳು ರೈತರ ಸಾಲ ಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ಮತ್ತೊಮ್ಮೆ ವಚನ ಭ್ರಷ್ಟನಾಗುತ್ತಾನೆ ಎಂದು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಾಲ ಮನ್ನಾದಿಂದ ಹಿಂದೆ ಸರಿಯುವುದಿಲ್ಲ. ಬಜೆಟ್‌ ಸಭೆ ಜತೆ ಜತೆಗೆ ರಾಷ್ಟ್ರೀಕೃತ ಬ್ಯಾಂಕ್‌ ಮತ್ತು ಸಹಕಾರಿ ಬ್ಯಾಂಕುಗಳೊಂದಿಗೆ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಮಾಧ್ಯಮಗಳು ಕೇವಲ ರಾಜಕೀಯದ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಚರ್ಚಿಸಿದರೆ ಅನುಕೂಲವಾಗುತ್ತದೆ. ಕೆಲವು ಮಾಧ್ಯಮಗಳು ಸತ್ಯಾಂಶವಿಲ್ಲದ ವರದಿಗಳನ್ನು ಪ್ರಸಾರ ಮಾಡಿ ಅವರೇ ನಗೆಪಾಟಲಿಗೆ ಗುರಿಯಾಗುತ್ತಾರೆ. ಹೀಗಾಗಿ, ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ಕಣ್ತೆರೆಸಬೇಕೇ ವಿನಾ ರಾಜಕೀಯ ವಿಷಯಗಳಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಕಿವಿಮಾತು ಹೇಳಿದರು.

ಇನ್ನು ಲೆಕ್ಕ ಪರಿಶೋಧಕರನ್ನು ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರವು ಜಿಎಸ್‌ಟಿ ಮತ್ತು ರೇರಾ ಕಾಯ್ದೆ ಜಾರಿ ಮಾಡಿದ ಸಂದರ್ಭದಲ್ಲಿ ನೀವು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದೀರಿ. ತೆರಿಗೆದಾರರಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ತೆರಿಗೆ ಪಾವತಿಸುವಂತೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸರ್ಕಾರಗಳು ಜಾರಿಗೊಳಿಸುವ ಕಾನೂನುಗಳು ಜನರಿಗೆ ಅನನುಕೂಲ ಉಂಟುಮಾಡಬಾರದು. ನಾನು ರೈತರ ಪರವಾಗಿ ಮಾತ್ರವಲ್ಲ, ಎಲ್ಲ ವರ್ಗದ ಜನರ ಪರವಾಗಿಯೂ ಇದ್ದೇನೆ. ನಿಮ್ಮ ಪರವಾಗಿಯೂ ಇದ್ದೇನೆ. ಅಂಬೇಡ್ಕರ್‌ ಭವನದ ಬಳಿ ಭೋಗ್ಯದಲ್ಲಿ ನಡೆಯುತ್ತಿರುವ ಸಂಸ್ಥೆಯನ್ನು ಕಾನೂನು ವ್ಯಾಪ್ತಿಯಲ್ಲಿ ಮಾರಾಟ ಮಾಡಲು ಸಾಧ್ಯವಿದೆಯೇ ಎಂಬುದನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಂಘದ ರಾಜ್ಯ ಶಾಖೆ ಅಧ್ಯಕ್ಷ ಶರವಣ ಗೂಡುತ್ತೂರು, ಕಾರ್ಯದರ್ಶಿ ರವೀಂದ್ರ ಎಸ್‌. ಕೋರೆ, ಉಪಾಧ್ಯಕ್ಷ ಜೆ.ಸಿ. ಶರ್ಮಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಜುಲೈ ಮೊದಲ ವಾರ ಬಜೆಟ್‌

ಬರುವ ಜುಲೈ ಮೊದಲ ವಾರದಲ್ಲಿ ಸಮ್ಮಿಶ್ರ ಸರ್ಕಾರದ ಬಜೆಟ್‌ ಮಂಡನೆ ಮಾಡಲಾಗುವುದು ಎಂದು ಹಣಕಾಸು ಖಾತೆಯ ಹೊಣೆಯನ್ನೂ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ಉದ್ಯೋಗ ಸೃಷ್ಟಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಘೋಷಿಸಲಾಗುತ್ತದೆ. ಆದರೆ, ಕೆಲವರು ಸಮ್ಮಿಶ್ರ ಸರ್ಕಾರದಲ್ಲಿ ಮತ್ತೊಂದು ಬಜೆಟ್‌ ಏಕೆ? ಕುಮಾರಸ್ವಾಮಿ ಹೆಸರು ಮಾಡುವ ಉದ್ದೇಶದಿಂದ ಬಜೆಟ್‌ ಮಂಡನೆ ಮಾಡಲು ಹೊರಟಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ ಎಂದೂ ಅವರು ಟೀಕಿಸಿದ್ದಾರೆ.

ಏನಿದರ ಮರ್ಮ?

ಮುಂದಿನ ಒಂದು ವರ್ಷ ಕಾಲವಂತೂ ಸರ್ಕಾರ ಗಟ್ಟಿಯಾಗಿರುತ್ತದೆ. ನನ್ನನ್ನು ಯಾರೂ ಟಚ್‌ ಮಾಡಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆವರೆಗೂ ಸರ್ಕಾರ ಸುಭದ್ರವಾಗಿರುತ್ತದೆ. ರಾಜ್ಯದಲ್ಲಿ ಉತ್ತಮ ಮಳೆ ಸುರಿಸುವ ಮೂಲಕ ಪ್ರಕೃತಿ ಕೂಡ ನನ್ನ ಪರವಾಗಿಯೇ ಇದೆ. ಹಣ ಪಡೆಯುವ ಅಧಿಕಾರಿಗಳನ್ನು ಬಿಗಿಗೊಳಿಸಿ ಸರ್ಕಾರ ನಡೆಸಲಾಗುವುದು.

- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ