ಓಸ್ಲೋ (ನಾರ್ವೆ): ಲೈಂಗಿಕ ಶೋಷಣೆಯನ್ನು ಯುದ್ಧದ ಸಂದರ್ಭದಲ್ಲಿ ಪ್ರಬಲ ಅಸ್ತ್ರ ಮಾಡಿಕೊಳ್ಳುವುದನ್ನು ಕೊನೆಗಾಣಿಸಲು ಪ್ರಯತ್ನಿಸುತ್ತಿರುವ ಕಾಂಗೋದ ಸ್ತ್ರೀರೋಗ ತಜ್ಞ ಡಾ

ಡೆನಿಸ್‌ ಮುಕ್ವೆಗೆ ಹಾಗೂ ಐಸಿಸ್‌ ಭಯೋತ್ಪಾದಕರ ಲೈಂಗಿಕ ಗುಲಾಮಳಾಗಿ, ಈಗ ಅದರ ವಿರುದ್ಧ ಹೋರಾಟ ನಡೆಸುತ್ತಿರುವ ಇರಾಕ್‌ನ ಯಜಿದಿ ಸಮುದಾಯದ ನಡಿಯಾ ಮುರಾಡ್‌ ಅವರಿಗೆ ಪ್ರಸಕ್ತ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿ ಲಭಿಸಿದೆ.

ವಿಶ್ವದ ಅತ್ಯುತ್ಕೃಷ್ಟಪ್ರಶಸ್ತಿ ಎನಿಸಿದ ನೊಬೆಲ್‌ ಶಾಂತಿ ಗೌರವಕ್ಕೆ ಈ ಬಾರಿ 331 ವ್ಯಕ್ತಿ ಹಾಗೂ ಸಂಸ್ಥೆಗಳು ನಾಮನಿರ್ದೇಶನಗೊಂಡಿದ್ದವು. ವಿಶ್ವಾದ್ಯಂತ ಯುದ್ಧ ಬಿಕ್ಕಟ್ಟಿನ ವೇಳೆ ಲೈಂಗಿಕ ದೌರ್ಜನ್ಯ ನಡೆಸುವುದರ ವಿರುದ್ಧ ಹೋರಾಟ ನಡೆಸುತ್ತಿರುವ ಕಾರಣಕ್ಕೆ ಈ ಇಬ್ಬರನ್ನು ಆಯ್ಕೆ ಮಾಡಲಾಗಿದೆ ಎಂದು ನೊಬೆಲ್‌ ಸಮಿತಿಯ ಮುಖ್ಯಸ್ಥೆ ಬೆರಿಟ್‌ ರೀಸ್‌ ಆ್ಯಂಡರ್‌ಸನ್‌ ಅವರು ತಿಳಿಸಿದ್ದಾರೆ.

63 ವರ್ಷದ ಡೆನಿಸ್‌ ಮುಕ್ವೆಗೆ ಹಾಗೂ 25 ವರ್ಷ ವಯಸ್ಸಿನ ನಾಡಿಯಾ ಮುರಾಡ್‌ ಅವರಿಗೆ ಡಿ.10ರಂದು ನಾರ್ವೆಯ ರಾಜಧಾನಿ ಓಸ್ಲೋದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶಾಂತಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.