ಬೆಂಗಳೂರು :  ಮಹಿಳಾ ಪ್ರಯಾಣಿಕರಿಗೆ ತುರ್ತು ಸಂದರ್ಭದಲ್ಲಿ ನೆರವು ನೀಡಲು ಹಾಗೂ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ನಿರ್ಭಯಾ ಯೋಜನೆಯಡಿ ಖರೀದಿಸಿದ್ದ 25 ‘ಪಿಂಕ್‌ ಸಾರಥಿ’ ವಾಹನಗಳು ಕಳೆದ ಮೂರು ತಿಂಗಳಿಂದ ಧೂಳು ಹಿಡಿಯುತ್ತಿವೆ.

ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯ ಅನುದಾನದಡಿ ಬಿಎಂಟಿಸಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ‘ಪಿಂಕ್‌ ಸಾರಥಿ’ ವಾಹನ ಸೇವೆ ಯೋಜನೆ ರೂಪಿಸಿದೆ. ಈ ವಾಹನದಲ್ಲಿ ಬಿಎಂಟಿಸಿಯ ಇಬ್ಬರು ಅಥವಾ ಮೂವರು ಮಹಿಳಾ ಸಿಬ್ಬಂದಿ ಇರಲಿದ್ದು, ನಗರದಾದ್ಯಂತ ಗಸ್ತು ತಿರುಗಲಿದ್ದಾರೆ. ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಮಾರ್ಗ ಮಧ್ಯೆ ತೊಂದರೆಗೆ ಸಿಲುಕಿದರೆ ಅಥವಾ ತುರ್ತು ಸಂದರ್ಭಗಳಲ್ಲಿ ತಕ್ಷಣ ಉಚಿತ ಸಹಾಯವಾಣಿಗೆ ಕರೆ ಮಾಡಿ ಈ ಪಿಂಕ್‌ ಸಾರಥಿಯ ನೆರವು ಪಡೆಯಬಹುದು. ಅಲ್ಲದೆ, ಪ್ರಯಾಣಿಕರು ಅಗತ್ಯ ಬಿದ್ದರೆ ಈ ಪಿಂಕ್‌ ಸಾರಥಿ ಸಿಬ್ಬಂದಿಯ ಮೂಲಕ ಪೊಲೀಸರ ನೆರವನ್ನೂ ಪಡೆಯಬಹುದು. ಒಟ್ಟಾರೆ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಅದರಂತೆ ಬಿಎಂಟಿಸಿಯು ಮೂರು ತಿಂಗಳ ಹಿಂದೆ ಸುಮಾರು ತಲಾ 8 ಲಕ್ಷ ಮೌಲ್ಯದ 25 ಬೊಲೆರೋ ವಾಹನ ಖರೀದಿಸಿದ್ದು, ಪಿಂಕ್‌ ಸಾರಥಿ ವಾಹನಗಳಾಗಿ ಮಾರ್ಪಡಿಸಿದೆ. ವಿಪರ್ಯಾಸವೆಂದರೆ, ಕಳೆದ ಮೂರು ತಿಂಗಳಿಂದಲೂ ಈ ಪಿಂಕ್‌ ಸಾರಥಿ ವಾಹನಗಳು ಶಾಂತಿನಗರದ ಕೇಂದ್ರೀಯ ಕಾರ್ಯಾಗಾರದ ಆವರಣದಲ್ಲಿ ಧೂಳು ಹಿಡಿಯುತ್ತಿವೆ. ಲಕ್ಷಾಂತರ ರು. ನೀಡಿ ಹೊಸ ವಾಹನಗಳನ್ನು ಖರೀದಿಸಿ, ಒಂದೆಡೆ ನಿಲ್ಲಿಸಲಾಗಿದೆ. ವಾಹನಗಳು ಹೆಚ್ಚು ದಿನ ಒಂದೇ ಕಡೆ ನಿಲುಗಡೆ ಮಾಡಿದರೆ ತಕ್ಕು ಹಿಡಿಯುವ ಸಾಧ್ಯತೆಯಿದೆ. ವಾಹನಗಳು ಸಿದ್ಧಗೊಂಡಿದ್ದರೂ ಬಿಎಂಟಿಸಿ ಆಡಳಿತ ಮಂಡಳಿ ಪಿಂಕ್‌ ಸಾರಥಿ ಸೇವೆಗೆ ಚಾಲನೆ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ನಿಗಮದ ನೌಕರರೇ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಸಿಎಂಗಾಗಿ ವಿಳಂಬ!

ಪಿಂಕ್‌ ಸಾರಥಿ ವಾಹನಗಳು ಸಿದ್ಧಗೊಂಡು ಮೂರು ತಿಂಗಳಾಗಿದೆ. ಮುಖ್ಯಮಂತ್ರಿಗಳಿಂದ ಈ ವಾಹನಗಳಿಗೆ ಚಾಲನೆ ಕೊಡಿಸಲು ಬಿಎಂಟಿಸಿ ಆಡಳಿತ ಮಂಡಳಿ ತೀರ್ಮಾನಿಸಿರುವುದರಿಂದ ಮುಖ್ಯಮಂತ್ರಿಗಳ ಸಮಯಕ್ಕಾಗಿ ಕಾಯುತ್ತಿದೆ. ಹಾಗಾಗಿ ಸೇವೆಗೆ ಚಾಲನೆ ನೀಡಲು ವಿಳಂಬವಾಗುತ್ತಿದೆ. ಲೋಕಸಭಾ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಪ್ರಸ್ತುತ ಸೇವೆಗೆ ಚಾಲನೆ ನೀಡಲು ಸಾಧ್ಯವಿಲ್ಲ. ಚುನಾವಣಾ ಫಲಿತಾಂಶ ಬಂದ ಬಳಿಕ ಮುಖ್ಯಮಂತ್ರಿಗಳಿಂದ ಸಮಯ ಪಡೆದು ಸೇವೆಗೆ ಚಾಲನೆ ನೀಡುವ ನಿರೀಕ್ಷೆಯಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೂ ಮುನ್ನವೇ ಪಿಂಕ್‌ ಸಾರಥಿ ವಾಹನಗಳು ಸೇವೆಗೆ ಸಿದ್ಧಗೊಂಡಿದ್ದವು. ಆದರೆ, ನಿಗಮದ ಆಡಳಿತ ಮಂಡಳಿ ಪಿಂಕ್‌ ಸಾರಥಿ ಸೇವೆಗೆ ಚಾಲನೆ ನೀಡುವಲ್ಲಿ ನಿರ್ಲಕ್ಷ್ಯ ತಳೆಯಿತು. ಹೀಗಾಗಿ ಕಳೆದ ಮೂರು ತಿಂಗಳಿಂದ ಪಿಂಕ್‌ ಸಾರಥಿ ವಾಹನಗಳು ಕೇಂದ್ರೀಯ ಕಾರ್ಯಾಗಾರದಲ್ಲಿ ಮಳೆಯಲ್ಲಿ ತೋಯ್ದು, ಬಿಸಿಲಿನಲ್ಲಿ ಒಣಗುತ್ತಿವೆ. ಸೇವೆಗೆ ಚಾಲನೆ ನೀಡಲು ಸಾರಿಗೆ ಇಲಾಖೆಗೆ ಸಚಿವರು ಇದ್ದಾಗಲೂ ಮುಖ್ಯಮಂತ್ರಿಗಳನ್ನೇ ಕಾಯುವುದು ಎಷ್ಟುಸರಿ ಎಂದು ನಿಗಮದ ಅಧಿಕಾರಗಳೇ ಪ್ರಶ್ನಿಸುತ್ತಾರೆ.

ವರದಿ : ಮೋಹನ್ ಹಂಡ್ರಂಗಿ