ಮುಂಬೈ/ನವದೆಹಲಿ: ಕೇಬಲ್ ಟೀವಿ ಶುಲ್ಕ ಹಾಗೂ ವ್ಯವಸ್ಥೆ ನಿಯಂತ್ರಣಕ್ಕೆ ಡಿ.29 ರಿಂದ ಹೊಸ ವ್ಯವಸ್ಥೆ ಜಾರಿಗೆ ಬರುತ್ತಿರುವುದರಿಂದ ಚಾನೆಲ್‌ಗಳ ಪ್ರಸಾರವೇ ಸ್ಥಗಿತಗೊಳ್ಳಬಹುದು ಎಂಬ ಭೀತಿಯನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದ ಅಧ್ಯಕ್ಷ ಆರ್.ಎಸ್. ಶರ್ಮಾ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.

ಚಾನೆಲ್‌ಗಳ ಪ್ರಸಾರ ಸ್ಥಗಿತಗೊಂಡರೆ ಯಾರಿಗೂ ಉಪಯೋಗವಿಲ್ಲ. ಆ ರೀತಿ ಏನೂ ಆಗದು. ಹೊಸ ವ್ಯವಸ್ಥೆಗೆ ಸುಗಮವಾಗಿ ವರ್ಗವಾಗು ವುದಕ್ಕೆ 20  ದಿನಗಳ ಯೋಜನೆ ರೂಪಿಸುತ್ತಿದ್ದೇವೆ. ಅದನ್ನು ಶೀಘ್ರ ಪ್ರಕಟಿಸುತ್ತೇವೆ. ಆದಾಗ್ಯೂ ಜ. 1ರಿಂದ ಚಾನೆಲ್‌ಗಳ ಸಂಪರ್ಕವೇನೂ ಕಡಿತಗೊಳ್ಳುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೊಸ ವ್ಯವಸ್ಥೆಯಿಂದಾಗಿ ಟೀವಿ ನೋಡಲು ಗ್ರಾಹಕರು ಪಾವತಿಸುತ್ತಿರುವ ಶುಲ್ಕ ಇಳಿಕೆಯಾಗಲಿದೆ. ಶೀಘ್ರದಲ್ಲೇ ಇಳಿಕೆಯಾಗುತ್ತಾ ಅಥವಾ ಸ್ವಲ್ಪ ದಿನ ತೆಗೆದುಕೊಳ್ಳುತ್ತಾ ಎಂಬುದನ್ನು ನೋಡಬೇಕು. ಗ್ರಾಹಕರು ತಮಗಿಷ್ಟ ಬಂದ ಚಾನೆಲ್ ಆಯ್ಕೆ ಮಾಡಿಕೊಳ್ಳಲು ಆರಂಭಿಸಿದ  ನಂತರ ಸ್ಪರ್ಧೆ ಹೆಚ್ಚಾಗಿ ಚಾನೆಲ್‌ಗಳು ತಮ್ಮ ಬೆಲೆಯನ್ನು ಇಳಿಸಬೇಕಾಗುತ್ತದೆ ಎಂದಿದ್ದಾರೆ.

ಎಲ್ಲ ಚಾನೆಲ್ ನೋಡಬೇಕು ಎಂದು ಬಯಸುವವರಿಗೆ ಬೆಲೆ ಖಂಡಿತ ಹೆಚ್ಚಳವಾಗುತ್ತದೆ. ಆದರೆ ಬೆಲೆ ಬಗ್ಗೆಯೂ ಗಮನವಹಿಸುವ ಗ್ರಾಹಕರು ಎಷ್ಟು ಚಾನೆಲ್ ಬೇಕೋ ಅಷ್ಟನ್ನು ಮಾತ್ರವೇ ನೋಡುತ್ತಾರೆ. ಸಾಮಾನ್ಯವಾಗಿ ಒಬ್ಬ ಗ್ರಾಹಕ 20 ರಿಂದ 25  ಚಾನೆಲ್‌ಗಳನ್ನು ವೀಕ್ಷಿಸುತ್ತಾನೆ. ಆದಾಗ್ಯೂ 400 ರಿಂದ 450  ರು. ಪಾವತಿಸುತ್ತಾನೆ. ಇನ್ನು ಮುಂದೆ ಇಷ್ಟ ಬಂದ ಚಾನೆಲ್ ಆಯ್ಕೆ ಮಾಡಿಕೊಳ್ಳಿ. ಅದೂ ಎಂಆರ್‌ಪಿ ದರಕ್ಕೆ. ಆಗ
ಬೆಲೆ ಕಡಿಮೆಯಾಗುತ್ತದೆ ಎಂದಿದ್ದಾರೆ.