ಬೆಂಗಳೂರು :  ಸಕಲೇಶಪುರದಿಂದ ಸುಬ್ರಹ್ಮಣ್ಯ ರಸ್ತೆವರೆಗೆ ಶಿರಾಡಿ ಘಾಟ್‌ ರೈಲು ಮಾರ್ಗದ ಭೂಕುಸಿತ ತೆರವು ಹಾಗೂ ಹಳಿ ದುರಸ್ತಿ ಕಾರ್ಯಾಚರಣೆ ವಿಳಂಬವಾಗುತ್ತಿರುವುದರಿಂದ ಅಕ್ಟೋಬರ್‌ನಲ್ಲೂ ಬೆಂಗಳೂರು-ಮಂಗಳೂರು ರೈಲು ಸಂಚಾರ ಅನುಮಾನವಾಗಿದೆ.

ಆಗಸ್ಟ್‌ 14ರ ಬಳಿಕ ಘಾಟಿ ಪ್ರದೇಶದಲ್ಲಿ 62ಕ್ಕೂ ಹೆಚ್ಚು ಪ್ರದೇಶದಲ್ಲಿ ಭೂಕುಸಿತ ಹಾಗೂ ಹಲೆವೆಡೆ ಮಳೆ ನೀರು ನುಗ್ಗಿ ರೈಲ್ವೆ ಹಳಿಗಳಿಗೆ ಹಾನಿಯಾಗಿದ್ದರಿಂದ ಆಗಸ್ಟ್‌ ಮಾಸಾಂತ್ಯದಿಂದ ರೈಲು ಸಂಚಾರ ಸ್ಥಗಿತಗೊಂಡಿತ್ತು. ಹಲವು ಭಾಗಗಳಲ್ಲಿ ಬೃಹತ್‌ ಗಾತ್ರದ ಬಂಡೆಗಳು ಹಳಿ ಮೇಲೆ ಬಿದ್ದಿದ್ದು, ತೆರವು ಕಾರ್ಯಾಚರ ವಿಳಂಬವಾಗುತ್ತಿದೆ. ಈ ತೆರವು ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಹಳಿ ದುರಸ್ತಿ ಮಾಡಬೇಕಾಗಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್‌ಆರ್‌)ರೈಲು ನಿಲ್ದಾಣದಿಂದ ಹೊರಡುವ ಕೆಎಸ್‌ಆರ್‌ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16511/16513) ಸೆ.28ರವರೆಗೆ ಹಾಗೂ ಕೆಎಸ್‌ಆರ್‌ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್‌(ರೈಲು ಸಂಖ್ಯೆ 16517/16523) ಸೆ.25ರವರೆಗೆ ರದ್ದಾಗಿದೆ. ಸೆ.30ರವರೆಗೆ ಕಣ್ಣೂರು/ಕಾರವಾರದಿಂದ ಹೊರಡುವ ಕಣ್ಣೂರು/ಕಾರವಾರ-ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಸಂಚಾರ ರದ್ದುಗೊಳಿಸಲಾಗಿದೆ.

ಯಶವಂತಪುರದಿಂದ ಮಂಗಳೂರು ಜಂಕ್ಷನ್‌ವರೆಗೆ ಕಾರ್ಯಾಚರಣೆ ನಡೆಸುವ ಎಕ್ಸ್‌ಪ್ರೆಸ್‌ ರೈಲು ಸೆ.27ರವರೆಗೆ ಹಾಸನದವರೆಗೆ ಸಂಚರಿಸಲಿದೆ. ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ರೈಲು ಸೆ.28ರವರೆಗೆ ಹಾಸನ ವರೆಗೆ ಸಂಚರಿಸಲಿದೆ. ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಿಂದ ಹೊರಡುವ ಎಕ್ಸ್‌ಪ್ರೆಸ್‌ ರೈಲು ಹಾಗೂ ಕಾರವಾರದಿಂದ ಹೊರಡುವ ಎಕ್ಸ್‌ಪ್ರೆಸ್‌ ರೈಲು ಸೆ. 28 ರವರೆಗೂ ರದ್ದುಗೊಳಿಸಲಾಗಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.