ಎ.ಮಂಜು , ಮೋಯ್ಲಿ ಪುತ್ರರಿಗೆ ಇಲ್ಲ ಕಾಂಗ್ರೆಸ್ ಟಿಕೆಟ್

First Published 29, Mar 2018, 11:20 AM IST
No ticket for Harsha Moily
Highlights

ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರರು ಸ್ಪರ್ಧಿಸುವುದಿಲ್ಲ ಎಂದು ಹಿರಿಯ ಮುಖಂಡ ಎಂ. ವೀರಪ್ಪ ಮೊಯ್ಲಿ ಹಾಗೂ ಸಚಿವ ಎ. ಮಂಜು ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು : ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರರು ಸ್ಪರ್ಧಿಸುವುದಿಲ್ಲ ಎಂದು ಹಿರಿಯ ಮುಖಂಡ ಎಂ. ವೀರಪ್ಪ ಮೊಯ್ಲಿ ಹಾಗೂ ಸಚಿವ ಎ. ಮಂಜು ಅವರು ಸ್ಪಷ್ಟಪಡಿಸಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಎಂ. ವೀರಪ್ಪ ಮೊಯ್ಲಿ, ತಮ್ಮ ಪುತ್ರನಿಗೆ ಟಿಕೆಟ್ ಬೇಡ ಎಂದು ನಾನೇ ತಿಳಿಸಿದ್ದೇನೆ. ಹೀಗಾಗಿ ನನ್ನ ಪುತ್ರ ಹರ್ಷ ಮೊಯ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಬದಲಿಗೆ ಪಕ್ಷ ಸೂಚಿಸಿದವರ ಪರವಾಗಿ ಕೆಲಸ ಮಾಡುತ್ತಾನೆ ಎಂದು ಹೇಳಿದರು. ಕಾಂಗ್ರೆಸ್ ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲಿ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಹಣ ಕೆಲಸ  ಮಾಡುತ್ತಿದೆ ಎಂಬ ತಮ್ಮ ತಂದೆಯ ಟ್ವೀಟನ್ನು ರೀಟ್ವೀಟ್ ಮಾಡಿ ಪಕ್ಷದ ಕೆಂಗಣ್ಣಿಗೆ ಹರ್ಷ ಮೊಯ್ಲಿ ತುತ್ತಾಗಿದ್ದರು.

ಈ ಟ್ವೀಟ್ ಕಾಂಗ್ರೆಸ್‌ಗೆ ತೀವ್ರ ಮುಜುಗರ ಉಂಟು ಮಾಡಿದ್ದ ಹಿನ್ನೆಲೆಯಲ್ಲಿ ಕಾರಣ ಕೇಳಿ ಶೋಕಾಸ್ ನೋಟಿಸನ್ನೂ ಜಾರಿಗೊಳಿಸಿತ್ತು. ಇದೀಗ ಬುಧವಾರ ನಡೆದ ಸಭೆಯಲ್ಲಿ ತಮ್ಮ ಪುತ್ರನಿಗೆ ಕಾರ್ಕಳ ಕ್ಷೇತ್ರದ ಟಿಕೆಟ್ ಬೇಡ ಎಂದು ಸ್ವತಃ ನಾನೇ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಉಳಿದಂತೆ ಪಶುಸಂಗೋಪನಾ ಸಚಿವ ಎ.ಮಂಜು, ಅರಕಲಗೂಡು ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಕೇಳಿದ್ದೇನೆ. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ಮಗ ಸ್ಪರ್ಧೆ ಮಾಡಲ್ಲ. ಅವನು ಯಾವುದೇ ಕ್ಷೇತ್ರದ ಆಕಾಂಕ್ಷಿಯೂ ಅಲ್ಲ ಎಂದು ಹೇಳಿದರು.

ಹಾಸನ ಜಿಲ್ಲೆ ವ್ಯಾಪ್ತಿಯಲ್ಲಿ ಅರಸೀಕೆರೆ, ಚನ್ನರಾಯಪಟ್ಟಣ ಕ್ಷೇತ್ರಗಳಲ್ಲಿ ಪಕ್ಷದಿಂದ ಸ್ಪರ್ಧೆ ಮಾಡಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಕಾಂಗ್ರೆಸ್ ಶಾಸಕರು ಇಲ್ಲದ ಕಡೆ ಎರಡು ಹೆಸರುಗಳನ್ನು ಕೊಟ್ಟಿದ್ದೇವೆ. ಹೈಕಮಾಂಡ್ ಟಿಕೆಟ್ ಅಂತಿಮಗೊಳಿಸಲಿದೆ ಎಂದು ಹಾಸನ ಉಸ್ತುವಾರಿಯೂ ಆದ ಎ. ಮಂಜು ಅವರು ತಿಳಿಸಿದರು.

ಕುಟುಂಬ ರಾಜಕಾರಣ ತಪ್ಪಲ್ಲ: ಇದೇ ವೇಳೆ ಗೃಹ ಸಚಿವ ರಾಮಲಿಂಗಾರೆಡ್ಡಿ, ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಕುಟುಂಬ ರಾಜಕಾರಣವನ್ನು ಸಮರ್ಥಿಸಿದ್ದು, ತಮ್ಮ ಮಕ್ಕಳಿಗೆ ಟಿಕೆಟ್ ಕೇಳಿದ್ದೇವೆ, ಸಿಗುವ ಭರವಸೆ ಇದೆ ಎಂದು ಹೇಳಿದರು.

ಕುಟುಂಬ ರಾಜಕಾರಣ ಎಲ್ಲಾ ಪಕ್ಷದಲ್ಲಿಯೂ ಇದೆ. ಅರ್ಹತೆ ಇದ್ದರೆ ರಾಜಕಾರಣಿಗಳ ಮಕ್ಕಳಿಗೂ ಟಿಕೆಟ್ ನೀಡಿದರೆ ತಪ್ಪಲ್ಲ ಎಂದು ಮಗಳಿಗೆ ಟಿಕೆಟ್ ಕೊಡಿಸಲು ಶತಾಯಗತಾಯ ಯತ್ನಿಸುತ್ತಿರುವ ಸಚಿವ ರಾಮ ಲಿಂಗಾರೆಡ್ಡಿ ಅವರು ಹೇಳಿದರು.

ಬಿಜೆಪಿಯಲ್ಲಿ ಯಡಿಯೂರಪ್ಪ ಪುತ್ರ ಶಾಸಕರಾಗಿದ್ದಾರೆ. ಹೀಗೆ ಎಲ್ಲಾ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಇದೆ. ನನ್ನ ಮಗಳೂ ಸಹ ರಾಜಕೀಯ ಪ್ರವೇಶಕ್ಕೆ ಉತ್ಸಾಹ ತೋರಿದ್ದು, ಟಿಕೆಟ್ ನಿರೀಕ್ಷೆಯಲ್ಲಿ ಇದ್ದಾಳೆ. ನನ್ನ ಮಗಳು ಎಂಬ ಕಾರಣ ಬಿಟ್ಟು ಅರ್ಹತೆ ಆಧಾರದ ಮೇಲೆ ಟಿಕೆಟ್ ಕೊಟ್ಟರೆ ಸಂತೋಷ ಎಂದರು.

loader