ವಿಜಯವಾಡ: ಡಿಸೆಂಬರ್‌ನಲ್ಲಿ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದ ಕಾಂಗ್ರೆಸ್‌ ಹಾಗೂ ತೆಲುಗುದೇಶಂ ಪಕ್ಷಗಳು ಆ ಮೈತ್ರಿಯನ್ನು ಆಂಧ್ರಪ್ರದೇಶಕ್ಕೆ ವಿಸ್ತರಿಸದೇ ಇರಲು ನಿರ್ಧರಿಸಿವೆ. ಪರಿಣಾಮವಾಗಿ, ಏಪ್ರಿಲ್‌- ಮೇನಲ್ಲಿ ನಡೆಯಲಿರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯುವುದಾಗಿ ಕಾಂಗ್ರೆಸ್‌ ಘೋಷಿಸಿದೆ.

175 ವಿಧಾನಸಭೆ ಹಾಗೂ 25 ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ಊಮ್ಮನ್‌ ಚಾಂಡಿ ಅವರು ವಿಜಯವಾಡದಲ್ಲಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಮಂಗಳವಾರವಷ್ಟೇ ತೆಲುಗುದೇಶಂ ನಾಯಕ ಚಂದ್ರಬಾಬು ನಾಯ್ಡು ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು. ಇದರ ಬೆನ್ನಲ್ಲೇ ಘೋಷಣೆ ಹೊರಬಿದ್ದಿದೆ. ಇದರೊಂದಿಗೆ ಅವಿಭಜಿತ ಆಂಧ್ರಪ್ರದೇಶದಲ್ಲಿ ಮಹಾಗಠಬಂಧನ ಪ್ರಯೋಗ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ.

ಮೈತ್ರಿ ವಿಚಾರವನ್ನು ರಾಹುಲ್‌ ಗಾಂಧಿ ಅವರ ವಿವೇಚನೆಗೆ ಬಿಡಲಾಗಿತ್ತು. ಅವರು ಮೈತ್ರಿ ಮಾಡಿಕೊಳ್ಳದೇ ಇರುವ ತೀರ್ಮಾನ ಕೈಗೊಂಡಿದ್ದಾರೆ ಎಂದು ಆಂಧ್ರ ಕಾಂಗ್ರೆಸ್‌ ಅಧ್ಯಕ್ಷ ರಘುವೀರ ರೆಡ್ಡಿ ತಿಳಿಸಿದ್ದಾರೆ.