ಹುಬ್ಬಳ್ಳಿ :  ಜೆಡಿಎಸ್‌ ರಾಜ್ಯಾಧ್ಯಕ್ಷ ವಿಶ್ವನಾಥ್‌ ಹೇಳಿಕೆಯಿಂದಾಗಿ ಒಂದೇ ಹೋಟೆಲಿನಲ್ಲಿದ್ದೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಮುಖಾಮುಖಿಯಾಗಲು ಮಂಗಳವಾರ ನಿರಾಕರಿಸಿದ್ದ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬುಧವಾರದಂದು ಸಚಿವ ಡಿ.ಕೆ.ಶಿವಕುಮಾರ ಅವರಿಂದಲೂ ಅಂತರ ಕಾಯ್ದುಕೊಂಡಿದ್ದು ಕಾಂಗ್ರೆಸ್ಸಿಗರನ್ನು ಕಂಗೆಡಿಸಿದೆ.

ಬುಧವಾರ ಡಿಕೆಶಿ ಜನ್ಮದಿನ, ಲಕ್ಷ್ಮೇಶ್ವರದ ಮುಕ್ತಿಮಂದಿರ, ಇನ್ನುಳಿದ ದೇವಾಲಯಗಳಿಗೆ ಪೂಜೆಗೆ ಹೋಗಿದ್ದರು ಎಂದು ಕೆಲವು ಕಾಂಗ್ರೆಸ್ಸಿಗರು ಸಮಜಾಯಿಸಿ ಹೇಳುತ್ತಿದ್ದರೂ ಇಡೀ ದಿನ ಈ ಇಬ್ಬರೂ ನಾಯಕರು ಮುಖಾಮುಖಿ ಆಗಲಿಲ್ಲ. ಕುಂದಗೋಳ ಪ್ರಚಾರ ಸಭೆಗಳಲ್ಲೂ ಜತೆಯಾಗಿ ಸೇರಲಿಲ್ಲ, ಫೋನಿನಲ್ಲೂ ಮಾತನಾಡಲಿಲ್ಲ. ಅದು ಹೋಗಲಿ ಜನ್ಮದಿನದ ಶುಭಾಶಯಕ್ಕೂ ಈ ಅಂತರ ಅಡ್ಡಿಯಾಯಿತು. ಇಬ್ಬರ ಮಧ್ಯೆ ಇಡೀ ದಿನ ಮಾತಿಲ್ಲ-ಕಥೆಯಿಲ್ಲ.

‘ಏನಪ್ಪ ಇದು ಈ ಡಿಕೆಶಿ ನನಗೆ ಅಡ್ಡಗಾಲು ಆಗುತ್ತಿದ್ದಾನಲ್ಲ ...’ ಎಂದು ತಮ್ಮ ಆಪ್ತರೆದುರು ಗೊಣಗಿಕೊಂಡಿದ್ದಾರಂತೆ ಸಿದ್ದರಾಮಯ್ಯ. ಇದೀಗ ಇಬ್ಬರೂ ನಾನೊಂದು ತೀರಾ.. ನೀನೊಂದು ತೀರಾ.. ಎಂಬಂತೆ ಒಂದೇ ನಗರದಲ್ಲಿದ್ದರೂ, ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದರೂ ಪ್ರತ್ಯೇಕವಾಗಿಯೇ ಸಭೆಗಳನ್ನು ನಡೆಸುತ್ತಿದ್ದಾರೆ. ಪ್ರಚಾರವನ್ನೂ ಪ್ರತ್ಯೇಕವಾಗಿ ಮಾಡುತ್ತಿದ್ದಾರೆ.

ಡಿಕೆಶಿ-ಬೆಂತೂರ ಆಡಿಯೋದಲ್ಲಿ ಸ್ವಾಮೀಜಿಯೊಬ್ಬರು ಡಿ.ಕೆ.ಶಿವಕುಮಾರ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ. ನೀವೆಲ್ಲ ಸಹಕರಿಸಿ, ನಿಮ್ಮ ಬೆನ್ನಿಗೆ ನಾವಿದ್ದೇವೆ’ ಎನ್ನುವ ಮಾತುಗಳು ಮತ್ತು ಸ್ವತಃ ಡಿಕೆಶಿ ‘ನಾನೇನು ಸನ್ಯಾಸಿಯಲ್ಲ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ’ ಎಂದಿರುವುದು ಸಿದ್ದು ಅಂತರ ಕಾಯ್ದುಕೊಳ್ಳಲು ಕಾರಣ ಎನ್ನುವ ವಿಶ್ಲೇಷಣೆ ಕೇಳಿ ಬರುತ್ತಿದೆ. ಇದೀಗ ಇಬ್ಬರ ಮಧ್ಯೆ ಮುನಿಸು ಕಾಣಿಸಿಕೊಂಡಿದೆಯಾ? ಒಬ್ಬರಿಗೊಬ್ಬರು ಮಾತನಾಡದಂಥ ಪರಿಸ್ಥಿತಿ ಉಂಟಾಗಿದೆಯಾ ಎಂಬಿತ್ಯಾದಿ ಪ್ರಶ್ನೆಗಳು ಕಾಂಗ್ರೆಸ್‌ ವಲಯದಲ್ಲಿ ಹರಿದಾಡಿವೆ.