ಬೆಂಗಳೂರು (ಮೇ. 07):  2019-20ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಸೀಟು ಹಂಚಿಕೆ ಪ್ರಕ್ರಿಯೆಗೆ ಆನ್‌ಲೈನ್‌ ಲಾಟರಿ ಮೂಲಕ ಸೋಮವಾರ ಚಾಲನೆ ನೀಡಲಾಗಿದೆ. ಆದರೆ ಇತ್ತೀಚೆಗೆ ಕಾಯ್ದೆಗೆ ಕೆಲವು ತಿದ್ದುಪಡಿ ಹಾಗೂ ಷರತ್ತು ವಿಧಿಸಿರುವ ಹಿನ್ನೆಲೆಯಲ್ಲಿ ಶೇ.40 ರಷ್ಟುಸೀಟುಗಳಿಗೆ ಅರ್ಜಿಗಳೇ ದಾಖಲಾಗಿಲ್ಲ.

ಖಾಸಗಿ ಶಾಲೆಗಳಿಗೆ ಶೇ.25 ರಷ್ಟುಸೀಟು ನೀಡದಿರುವುದರಿಂದ ದಾಖಲೆ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆ ಪ್ರಮಾಣ ಇಳಿಕೆಯಾಗಿದೆ. ಒಟ್ಟಾರೆ ಈ ಬಾರಿ 17,720 ಸೀಟುಗಳು ಲಭ್ಯವಿವೆ. ಆದರೆ, 643 ಶಾಲೆಗಳ 7243 ಸೀಟುಗಳಿಗೆ ಅರ್ಜಿಗಳೇ ದಾಖಲಾಗಿಲ್ಲ. ಹೀಗಾಗಿ, ಶೇ.50ರಷ್ಟುಸೀಟುಗಳು ಸಹ ತುಂಬುವುದು ಕಷ್ಟಸಾಧ್ಯವಾಗಿದೆ.

ಆರ್‌ಟಿಇ ಲಾಟರಿ ಪ್ರಕ್ರಿಯೆ ಚಾಲನೆ ನೀಡಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಎಂ.ಟಿ. ರೇಜು, ಸರ್ಕಾರಿ ಶಾಲೆಗಳಿಲ್ಲದ ಕಡೆ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಆರ್‌ಟಿಇ ಸೀಟು ಹಂಚಿಕೆ ಮಾಡಲಾಗಿದೆ.

ಈ ಬಾರಿ ಒಟ್ಟಾರೆ 2172 ಅನುದಾನಿತ ಮತ್ತು 219 ಅನುದಾನರಹಿತ ಶಾಲೆಗಳಲ್ಲಿ 17,720 ಸೀಟುಗಳು ಲಭ್ಯ ಇವೆ. ಈ ಪೈಕಿ ಪರಿಶಿಷ್ಟಜಾತಿ 5,461, ಪರಿಶಿಷ್ಟಪಂಗಡಕ್ಕೆ 1,157 ಮತ್ತು ಇತರೆ ವರ್ಗಕ್ಕೆ 1,102 ಸೀಟುಗಳನ್ನು ನಿಗದಿ ಮಾಡಲಾಗಿದೆ. ಅನುದಾನಿತ ಶಾಲೆಗಳಲ್ಲಿ 15,011 ಒಂದನೇ ತರಗತಿ ಹಾಗೂ 92 ಎಲ್‌ಕೆಜಿ ಸೀಟುಗಳು, ಅನುದಾನ ರಹಿತ ಶಾಲೆಗಳಲ್ಲಿ 1,209 ಎಲ್‌ಕೆಜಿ ಮತ್ತು 1,408 ಒಂದನೇ ತರಗತಿ ಸೇರಿ 2,617 ಸೀಟುಗಳು ಲಭ್ಯ ಇವೆ ಎಂದು ಹೇಳಿದರು.

ಆರ್‌ಟಿಇ ಸೀಟಿಗಾಗಿ ಖಾಸಗಿ ಶಾಲೆಗಳೇ ಕೋರ್ಟ್‌ಗೆ

ಖಾಸಗಿ ಶಾಲೆಗಳಲ್ಲಿ ಶೇ.25 ರಷ್ಟುನೀಡದಿರುವುದನ್ನು ಖಂಡಿಸಿ ಕೆಲವು ಶಾಲೆಗಳು ನ್ಯಾಯಾಲಯದ ಮೊರೆ ಹೋಗಿವೆ. ಪ್ರಕರಣವು ವಿಚಾರಣೆ ಹಂತದಲ್ಲಿದ್ದು, ತೀರ್ಪು ಯಾರ ಪರವಾಗಿ ಬಂದರೂ ಬದ್ಧರಾಗಿರುತ್ತೇವೆ ಎಂದು ಶಿಕ್ಷಣ ಇಲಾಖೆ ಆಯುಕ್ತ ಡಾ.ಎಂ.ಟಿ. ರೇಜು ತಿಳಿಸಿದರು.

ಲಾಟರಿ ಆಯ್ಕೆ ಪ್ರಕ್ರಿಯೆ ವೇಳೆ ಕೆಲವು ಪೋಷಕರು ನೀಡಿದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಆರ್‌ಟಿಇ 12(1) ತಿದ್ದುಪಡಿ ತರುವ ಮೂಲಕ ಖಾಸಗಿ ಶಾಲೆಗಳಿಗೆ ಸೀಟು ನೀಡಿಲ್ಲ. ತಿದ್ದುಪಡಿಯಾದ ನಿಯಮದಂತೆ ಲಾಟರಿ ಪ್ರಕ್ರಿಯೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

ಕಳೆದ ವರ್ಷ 1.5 ಲಕ್ಷ ಸೀಟು, ಈ ವರ್ಷ ಕೆಲವೇ ಸಾವಿರ!

ಆರ್‌ಟಿಇ ಕಾಯ್ದೆ-2009 ರಾಜ್ಯದಲ್ಲಿ 2012ರಲ್ಲಿ ಅನುಷ್ಠಾನವಾಯಿತು. ಕಾಯ್ದೆ ಪ್ರಕಾರ ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟುಸೀಟುಗಳನ್ನು ಬಡ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿತ್ತು. ಹೀಗಾಗಿ, ಪ್ರತಿ ವರ್ಷ ರಾಜ್ಯದ ಖಾಸಗಿ ಶಾಲೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಸೀಟುಗಳು ಬಡ ಮಕ್ಕಳಿಗೆ ಲಭ್ಯವಾಗುತ್ತಿದ್ದವು.

2017-18ರಲ್ಲಿ 1.15 ಲಕ್ಷ, 2018-19ರಲ್ಲಿ 1.52 ಲಕ್ಷ ಸೀಟುಗಳು ಲಭ್ಯವಾಗಿದ್ದವು. ಅದರಂತೆ ಕನಿಷ್ಠ ಎರಡು ಲಕ್ಷಕ್ಕೂ ಅಧಿಕ ಅರ್ಜಿಗಳು ದಾಖಲಾಗುತ್ತಿದ್ದವು. ಇದೀಗ ಸರ್ಕಾರಿ ಶಾಲೆಗಳು ಇಲ್ಲದ ಕಡೆ ಮಾತ್ರ ಖಾಸಗಿ ಶಾಲೆಗಳಿಗೆ ಅವಕಾಶ ನೀಡಿರುವುದರಿಂದ ಹೆಚ್ಚಿನ ಪೋಷಕರು ಆರ್‌ಟಿಇ ಅರ್ಜಿ ಸಲ್ಲಿಕೆಗೆ ಆಸಕ್ತಿ ತೋರಿಲ್ಲ.

ಎಲ್‌ಕೆಜಿಗೆ 5,197 ಮತ್ತು ಒಂದನೇ ತರಗತಿಗೆ 13,201 ಅರ್ಜಿಗಳು ದಾಖಲಾಗಿದ್ದು, ಈ ಬಾರಿ ಒಟ್ಟಾರೆ 18,398 ಅರ್ಜಿಗಳು ದಾಖಲಾಗಿವೆ. ಇದರಲ್ಲಿ ಎಲ್‌ಕೆಜಿಗೆ 4,269 ಮತ್ತು ಒಂದನೇ ತರಗತಿಗೆ 12,294 ಸೇರಿ 16,563 ಅರ್ಜಿಗಳು ಅರ್ಹವಾಗಿವೆ. ಸಮರ್ಪಕ ದಾಖಲೆಗಳನ್ನು ನೀಡದ ಪರಿಣಾಮ 1,836 ಅರ್ಜಿಗಳು ತಿರಸ್ಕೃತಗೊಂಡಿವೆ. ಅರ್ಜಿ ಪ್ರಕ್ರಿಯೆ ಆರಂಭಗೊಂಡ ಬಳಿಕ ಆಧಾರ್‌ ಅರ್ಜಿ ಸಲ್ಲಿಸಿ ಆ ನಂಬರ್‌ ಇರಿಸಿಕೊಂಡು ಆರ್‌ಟಿಇ ಅರ್ಜಿ ಸಲ್ಲಿಸಲು ಮುಂದಾಗಿದ್ದರು. ಅಂತಹ 1836 ಅರ್ಜಿಗಳನ್ನು ಮಾನ್ಯ ಮಾಡಿಲ್ಲ ಎಂದು ತಿಳಿಸಿದರು.

ಮೊದಲನೇ ಸುತ್ತಿನಲ್ಲಿ 7636 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ ವಿಶೇಷ ವರ್ಗಕ್ಕೆ 23, ಪರಿಶಿಷ್ಟಜಾತಿ 1,382, ಪರಿಶಿಷ್ಟಪಂಗಡ 262, ಇತರ ವರ್ಗಕ್ಕೆ 5969 ಸೀಟುಗಳು ಸೇರಿ ಒಟ್ಟಾರೆ 7,636 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ದಾಖಲಾತಿಗೆ 15ರ ವರೆಗೆ ಅವಕಾಶ:

ಬೆಂಗಳೂರಿನಲ್ಲಿ ಗಿರಿನಗರ ಮತ್ತು ಗಣೇಶ ಮಂದಿರ ವಾರ್ಡ್‌ಗಳಲ್ಲಿ ಸರ್ಕಾರಿ ಶಾಲೆಗಳು ಇಲ್ಲದಿರುವುದರಿಂದ ಈ ಎರಡು ವಾರ್ಡ್‌ಗಳಲ್ಲಿ ಮಾತ್ರ ಸೀಟು ಹಂಚಿಕೆ ಮಾಡಲಾಗಿದೆ. ಆಯ್ಕೆಯಾಗಿರುವ ಮಕ್ಕಳ ಪೋಷಕರ ಮೊಬೈಲ್‌ಗಳಿಗೆ ಸಂದೇಶ ರವಾನೆಯಾಗಿರುತ್ತದೆ.

ಮೇ 15ರೊಳಗೆ ಆಯ್ಕೆಯಾಗಿರುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡಬೇಕು. ಎರಡನೇ ಸುತ್ತಿನ ಲಾಟರಿ ಪ್ರಕ್ರಿಯೆ ಮೇ 25ರಂದು ನಡೆಯಲಿದೆ. ಮೇ 30ರೊಳಗೆ ಆರ್‌ಟಿಇ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.