Asianet Suvarna News Asianet Suvarna News

ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮವಿಲ್ಲ

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸರ್ಕಾರ ಅಂತಿಮ ತೆರೆ ಎಳೆದಿದೆ.  ವೀರಶೈವರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಕುರಿತು ಕರ್ನಾಟಕ ರಾಜ್ಯ ಸರ್ಕಾರ ಕಳುಹಿಸಿರುವ ಶಿಫಾರಸನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

No Separate Religion Status For Lingayat Religion Says Central Govt
Author
Bengaluru, First Published Dec 11, 2018, 7:14 AM IST

 ಬೆಂಗಳೂರು :  ರಾಜ್ಯದಲ್ಲಿ ಸಾಕಷ್ಟುಚರ್ಚೆಗೆ ಕಾರಣವಾಗಿದ್ದ ಲಿಂಗಾಯತರು ಹಾಗೂ ವೀರಶೈವರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಕುರಿತ ವಿವಾದಕ್ಕೆ ಕೇಂದ್ರ ಸರ್ಕಾರ ಸದ್ಯಕ್ಕೆ ಅಂತಿಮ ತೆರೆ ಎಳೆದಿದೆ. ಲಿಂಗಾಯತರು ಹಾಗೂ ಬಸವ ತತ್ವದ ಅನುಯಾಯಿ ವೀರಶೈವರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಕುರಿತು ಕರ್ನಾಟಕ ರಾಜ್ಯ ಸರ್ಕಾರ ಕಳುಹಿಸಿರುವ ಶಿಫಾರಸನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದು, ಈ ಕುರಿತು ಹೈಕೋರ್ಟ್‌ಗೆ ಸೋಮವಾರ ಮಾಹಿತಿ ನೀಡಿದೆ.

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಅಲ್ಪಸಂಖ್ಯಾತ ಆಯೋಗಕ್ಕೆ ವರ್ಗಾಯಿಸಿದ್ದ ರಾಜ್ಯ ಸರ್ಕಾರದ ಕ್ರಮ ಮತ್ತು ಮಾನ್ಯತೆ ನೀಡುವ ವಿಚಾರದ ವಿಚಾರಣೆಗೆ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿದ್ದ ರಾಜ್ಯ ಅಲ್ಪಸಂಖ್ಯಾತ ಆಯೋಗದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು.

ಸೋಮವಾರ ಈ ಅರ್ಜಿಗಳ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಎಸ್‌.ಸುಜಾತ ಅವರಿದ್ದ ವಿಭಾಗೀಯ ಪೀಠದ ಮುಂದೆ ಬಂದಿತ್ತು. ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ಲಿಂಗಾಯತರು ಹಾಗೂ ಬಸವ ತತ್ವದ ಅನುಯಾಯಿ ವೀರಶೈವರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಕುರಿತ ರಾಜ್ಯ ಸರ್ಕಾರದ ಪ್ರಸ್ತಾವನೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಕುರಿತು ಕೇಂದ್ರ ಸರ್ಕಾರವು 2018ರ ನ.13ರಂದು ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ, ಹಜ್‌ ಮತ್ತು ವಕ್ಫ್ ಇಲಾಖೆ ಕಾರ್ಯದರ್ಶಿಗೆ ಪತ್ರ ರವಾನಿಸಿದೆ ಎಂದು ಮಾಹಿತಿ ನೀಡಿದರು. ಹಾಗೆಯೇ, ಆ ಪತ್ರದ ಪ್ರತಿಯನ್ನು ಮೆಮೊದೊಂದಿಗೆ ನ್ಯಾಯಪೀಠಕ್ಕೆ ಸಲ್ಲಿಸಿದರು.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅವರ ಮೆಮೊ ದಾಖಲಿಸಿಕೊಂಡ ನ್ಯಾಯಪೀಠ, ಕೇಂದ್ರ ಸರ್ಕಾರದ ಹೇಳಿಕೆಯಿಂದ ಅರ್ಜಿದಾರರ ಮನವಿಯನ್ನು ಪರಿಗಣಿಸುವ ಪ್ರಮೇಯ ಇಲ್ಲವಾಗಿದೆ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತು.

ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡದಿರುವ ಕುರಿತಂತೆ ಕೇಂದ್ರ ಗೃಹ ಸಚಿವಾಲಯದ ಅಭಿಪ್ರಾಯವನ್ನು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಒಪ್ಪಿಕೊಂಡಿರುವುದರಿಂದ ರಾಜ್ಯ ಸರ್ಕಾರದ ಪ್ರಸ್ತಾವನೆ ಒಪ್ಪಲು ಸಾಧ್ಯವಿಲ್ಲ ಎಂದು ನ.13ರಂದು ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕಾರ್ಯದರ್ಶಿಗೆ ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿ ಯು.ಕೆ.ಸಿನ್ಹಾ ಅವರು ಕಳುಹಿಸಿರುವ ಪತ್ರದಲ್ಲಿ ತಿಳಿಸಲಾಗಿದೆ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಲಾಗಿದೆ.

ತಜ್ಞರ ಸಮಿತಿಯಲ್ಲಿ ಯಾರಿದ್ದರು?

ಲಿಂಗಾಯತ-ವೀರಶೈವ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಕುರಿತು ಪರಿಶೀಲಿಸಲು ಸಿದ್ದರಾಮಯ್ಯ ಅವರ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಿತ್ತು. ನ್ಯಾ.ಎಚ್‌.ಎನ್‌.ನಾಗಮೋಹನದಾಸ್‌ ಅಧ್ಯಕ್ಷರು, ರಾಜ್ಯ ಅಲಸ್ಪಂಖ್ಯಾತ ಆಯೋಗದ ಕಾರ್ಯದರ್ಶಿ ಅನೀಸ್‌ ಸಿರಾಜ್‌, ಹಿರಿಯ ಪತ್ರಕರ್ತ ಸರಜೂ ಕಾಟ್ಕರ್‌, ಹಿಂದುಳಿದ ಆಯೋಗಗಳ ಮಾಜಿ ಅಧ್ಯಕ್ಷ ಸಿ.ಎಸ್‌.ದ್ವಾರಕಾನಾಥ್‌, ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ, ಪ್ರಾಧ್ಯಾಪಕ ಡಾ.ಮುಜಾಫರ್‌ ಅಸಾದಿ, ಉಪನ್ಯಾಸಕ ರಾಮಕೃಷ್ಣ ಮರಾಠೆ ಮತ್ತು ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಸದಸ್ಯರಾಗಿದ್ದರು.

ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಹಿಂದಿನ ರಾಜ್ಯ ಸರ್ಕಾರ ಕಳುಹಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ರಾಜ್ಯ ಸರ್ಕಾರದ ಶಿಫಾರಸು ಒಪ್ಪಿಲ್ಲ ಎಂದು ತಿಳಿಸಿ ಕೇಂದ್ರ ಸರ್ಕಾರ ನ.13ರಂದೇ ಪತ್ರ ರವಾನಿಸಿದೆ. ಲಿಂಗಾಯತವು ಹಿಂದೂ ಧರ್ಮದ ಶಾಖೆ ಎಂಬ ಹಿಂದಿನ ನಿಲುವನ್ನು ಕೇಂದ್ರವು ಪುನರುಚ್ಚರಿಸಿದೆ.

- ಜಿ.ಆರ್‌.ಗುರುಮಠ್‌, ಅರ್ಜಿದಾರ ಶಶಿಧರ ಶಾನುಭೋಗ ಪರ ವಕೀಲ

ಕಾಂಗ್ರೆಸ್‌ಗೆ ಸಂಬಂಧವಿಲ್ಲ

ಲಿಂಗಾಯತ, ವೀರಶೈವರ ಬೇಡಿಕೆಗೆ ಅನುಸಾರ ಆಗಿನ ಸಿದ್ದರಾಮಯ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿತ್ತು ಅಷ್ಟೇ. ಅದನ್ನು ಹೊರತುಪಡಿಸಿದರೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೂ, ಕಾಂಗ್ರೆಸ್‌ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ.

- ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ


ಹೋರಾಟ ನಡೆಸ್ತೀವಿ

ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ತನ್ನ ನಿಲುವನ್ನು ಪುನರ್‌ ಪರಿಶೀಲಿಸಬೇಕು. ಇಲ್ಲದಿದ್ದರೆ ಅಗತ್ಯ ಪುರಾವೆಗಳೊಂದಿಗೆ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿ, ಕಾನೂನು ಹೋರಾಟ ಮುಂದುವರಿಸಲಾಗುವುದು.

- ಎಸ್‌.ಎಂ.ಜಾಮದಾರ್‌, ಲಿಂಗಾಯತ ಮಹಾಸಭಾ ಪ್ರಧಾನ ಕಾರ‍್ಯದರ್ಶಿ


ಕಾಂಗ್ರೆಸ್‌ಗೆ ಪಾಠ

ರಾಜಕೀಯ ಲಾಭಕ್ಕಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಹೋಗಿ ತಪ್ಪು ಮಾಡಿದ್ದೇವೆ ಎಂದು ಡಿಕೆಶಿ ಒಪ್ಪಿಕೊಂಡಿದ್ದಾರೆ. ಧರ್ಮ ವಿಭಜನೆಗೆ ಕೈಹಾಕಬಾರದಿತ್ತು ಎಂದು ಸಿದ್ದರಾಮಯ್ಯ ಅವರೂ ಹೇಳಿದ್ದಾರೆ. ಇನ್ನಾದರೂ ಧರ್ಮದ ವಿಚಾರದಲ್ಲಿ ಕಾಂಗ್ರೆಸ್‌ ಪಾಠ ಕಲಿಯಲಿ.

- ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ತಿರಸ್ಕಾರಕ್ಕೇನು ಕಾರಣ?

1. ಲಿಂಗಾಯತ-ವೀರಶೈವಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯನ್ನು ಈ ಹಿಂದೆಯೂ ಪರಿಗಣಿಸಲಾಗಿತ್ತು. 1871ರಲ್ಲಿ ನಡೆದ ದೇಶದ ಮೊಟ್ಟಮೊದಲ ಅಧಿಕೃತ ಜನಗಣತಿಯಲ್ಲಿ ಲಿಂಗಾಯತರನ್ನು ಹಿಂದೂಗಳೆಂದು ವರ್ಗೀಕರಿಸಲಾಗಿದೆ. ಅದರಂತೆ ಲಿಂಗಾಯತವನ್ನು ಹಿಂದೂ ಧಾರ್ಮಿಕ ಪಂಗಡವಾಗಿ ಪರಿಗಣಿಸಲಾಗಿದೆ.

2. ಒಂದು ವೇಳೆ ಪ್ರತ್ಯೇಕ ಕೋಡ್‌ ನೀಡುವ ಮೂಲಕ ಲಿಂಗಾಯತ-ವೀರಶೈವರನ್ನು ಹಿಂದೂ ಧರ್ಮೇತರರು ಎಂದು ಪರಿಗಣಿಸಿದರೆ ಲಿಂಗಾಯತ-ವೀರಶೈವ ಸಮುದಾಯದಲ್ಲಿ ಪರಿಶಿಷ್ಟಜಾತಿ (ಎಸ್ಸಿ) ಸ್ಥಾನಮಾನ ಹೊಂದಿರುವವರು ಆ ಸ್ಥಾನಮಾನ ಕಳೆದುಕೊಳ್ಳುವುದರಿಂದ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಾರೆ.

ಮುಂದೇನು?

- ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನ ಕುರಿತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದರಿಂದ ರಾಜ್ಯ ಸರ್ಕಾರ ಮೌನಕ್ಕೆ ಶರಣಾಗುವ ಮೂಲಕ ಅಲ್ಲಿಗೇ ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ.

- ಹಿಂದಿನ ಕಾಂಗ್ರೆಸ್‌ ಸರ್ಕಾರ ಈ ಪ್ರಸ್ತಾವನೆಯನ್ನು ಕಳುಹಿಸಿದ್ದನ್ನು ಆಗ ಪ್ರತಿಪಕ್ಷದಲ್ಲಿದ್ದ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿರೋಧಿಸಿದ್ದರು. ಹೀಗಾಗಿ, ಈಗ ಅವರು ಮತ್ತೆ ಪ್ರಯತ್ನ ಮಾಡುವ ಸಂಭವ ಕಡಮೆ.

- ಹಾಲಿ ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ, ಡಿಕೆಶಿ ಅವರು ಈಗಾಗಲೇ ಪ್ರಸ್ತಾವನೆ ಕಳುಹಿಸಬಾರದಿತ್ತು ಎಂಬರ್ಥದಲ್ಲಿ ಮಾತನಾಡಿರುವುದರಿಂದ ಈಗ ಸಿಎಂ ಮೇಲೆ ಒತ್ತಡ ಹೇರುವ ನಿರೀಕ್ಷೆ ಇಲ್ಲ.

- ಸ್ವತಂತ್ರ ಧರ್ಮ ಸ್ಥಾನಮಾನಕ್ಕಾಗಿ ಹೋರಾಟ ಮಾಡಿದ್ದ ಜಾಗತಿಕ ಲಿಂಗಾಯತ ಮಹಾಸಭಾ ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆ ಹೂಡುವ ಮೂಲಕ ಕಾನೂನು ಹೋರಾಟ ಮುಂದುವರೆಸಬಹುದು

Follow Us:
Download App:
  • android
  • ios